ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ 650ಕೋಟಿ ರೂ. ಮೀಸಲಿರಿಸಲು ಬೇಡಿಕೆ: ಎಂ.ಎ.ಗಫೂರ್,

ಉಡುಪಿ, ಮಾ.8: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಈ ಬಾರಿಯ ಬಜೆಟ್‌ನಲ್ಲಿ 650 ಕೋಟಿ ರೂ. ಮೀಸಲಿರಿಸುವಂತೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ತಿಳಿಸಿದ್ದಾರೆ.
ಉಡುಪಿ ಜಾಮೀಯ ಮಸೀದಿಯಲ್ಲಿ ಬುಧವಾರ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು. ಕಳೆದ ರಾಜ್ಯ ಬಜೆಟ್‌ನಲ್ಲಿ ನಿಗಮಕ್ಕೆ 250ಕೋಟಿ ರೂ. ಅನುದಾನವನ್ನು ಒದಗಿಸಲಾಗಿತ್ತು. ಈ ವರ್ಷ ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಶೇ.80 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಸ್ವಉದ್ಯೋಗಕ್ಕಾಗಿ 2000ಮಂದಿಗೆ ಗೂಡ್ಸ್ ವಾಹನ ನೀಡುವ ಯೋಜನೆ ಗೆ 70 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಒದಗಿಸುವಂತೆ ಮನವಿ ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಸಬ್ಸಿಡಿ ಯಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ. ಜೈಲು ಪಾಲಾಗುವ ನಿರಪರಾಧಿಗಳ ಕುಟುಂಬಕ್ಕೆ ಆರ್ಥಿಕ ನೆರವು ಕಲ್ಪಿಸುವ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಮಕಾನ್ ದುಖಾನ್ ಯೋಜನೆಯಲ್ಲಿ ಐದು ಲಕ್ಷ ರೂ. ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲಾಗುವುದು. ಉದ್ದಿಮೆ ನಡೆಸುವವರಿಗೆ ಶೇ.4ರ ಬಡ್ಡಿದರದಲ್ಲಿ 20ಲಕ್ಷ ರೂ. ಸಾಲ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ಅಲ್ಪಸಂಖ್ಯಾತರಿಗೆ ಸರಕಾರದ ಸೌಲಭ್ಯಗಳ ಮಾಹಿತಿ ಇಲ್ಲ. ಸುಮಾರು ಒಂದು ಕೋಟಿ ಜನಸಂಖ್ಯೆಯಲ್ಲಿ ಸೌಲಭ್ಯಗಳನ್ನು ಪಡೆದ ಫಲಾ ನುಭವಿಗಳ ಸಂಖ್ಯೆ ಕೇವಲ 82ಸಾವಿರ ಮಾತ್ರ. ಸುಮಾರು 32ಲಕ್ಷ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿವೆ. ಮುಸ್ಲಿಮ್ ಸಮುದಾಯ ತನ್ನೊಳ ಗಿನ ಭಿನ್ನಾಭಿಪ್ರಾಯವನ್ನು ಬಿಟ್ಟು ಒಗ್ಗಟ್ಟು ಸಾಧಿಸಬೇಕಾಗಿದೆ ಎಂದು ಅವರು ಹೇಳಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಅಬ್ದುಲ್ಲಾ ನಾವುಂದ, ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ ಉಪಸ್ಥಿತರಿದ್ದರು.
ಹಾಫೀಝ್ ವೌಲಾನ ಯುನೂಸ್ ಕಿರಾತ್ ಪಠಿಸಿದರು. ಒಕ್ಕೂಟದ ಉಪಾಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಸನ್ಮಾನಿತರನ್ನು ಪರಿಚಯಿಸಿದರು. ಎಂ.ಪಿ.ಮೊದಿನಬ್ಬ ವಂದಿಸಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.







