ಅಫ್ಘಾನಿಸ್ತಾನ: ವೈದ್ಯರ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿ ಉಗ್ರರ ದಾಳಿ

ಕಾಬೂಲ್, ಮಾ. 8: ವೈದ್ಯರ ವೇಷದಲ್ಲಿದ್ದ ಭಯೋತ್ಪಾದಕರು ಕಾಬೂಲ್‌ನಲ್ಲಿರುವ ಅಫ್ಘಾನಿಸ್ತಾನದ ಅತಿ ದೊಡ್ಡ ಸೇನಾ ಆಸ್ಪತ್ರೆಗೆ ನುಗ್ಗಿ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟ ನಡೆಸಿದ್ದಾರೆ.
ದೇಶಾದ್ಯಂತ ಭಯೋತ್ಪಾದಕ ಆಕ್ರಮಣಗಳನ್ನು ತಾಲಿಬಾನ್ ಹೆಚ್ಚಿಸಿರುವಂತೆಯೇ, ಸರ್ದಾರ್ ದೌಡ್ ಖಾನ್ ಆಸ್ಪತ್ರೆಯ ಮೇಲೆ ದಾಳಿಯಾಗಿದೆ.
ಸಾವು ನೋವಿನ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ. ಆದರೆ, ಆಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ವೈದ್ಯಕೀಯ ಸಿಬ್ಬಂದಿ ರಕ್ಷಣೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹತಾಶೆಯಿಂದ ಮೊರೆಯಿಟ್ಟಿದ್ದಾರೆ.
ಬಿಳಿಯ ಪ್ರಯೋಗಾಲಯ ಕೋಟ್‌ಗಳನ್ನು ಧರಿಸಿರುವ ಮೂವರು ಬಂದೂಕುಧಾರಿಗಳು ಆಸ್ಪತ್ರೆಯಲ್ಲಿದ್ದಾರೆ ಹಾಗೂ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಗೊಂದಲದ ಗೂಡಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ಪ್ರತಿದಿನ ಮನಬಂದಂತೆ ದಾಳಿಗಳನ್ನು ನಡೆಸುತ್ತಿದ್ದಾರೆ.
Next Story





