ಮಧ್ಯಪ್ರದೇಶ ರೈಲು ಸ್ಫೋಟ ಪ್ರಕರಣದ ತನಿಖೆಗೆ ಎನ್‌ಐಎ ತಂಡ

ಹೊಸದಿಲ್ಲಿ,ಮಾ.8: ಭಯೋತ್ಪಾದಕ ಕೃತ್ಯವೆಂದು ಶಂಕಿಸಲಾಗಿರುವ ಮಧ್ಯಪ್ರದೇಶ ರೈಲು ಸ್ಫೋಟ ಪ್ರಕರಣದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ತಂಡವೊಂದು ಬುಧವಾರ ಭೋಪಾಲ್ ತಲುಪಿದೆ.
ಶಾಜಾಪುರ್ ಜಿಲ್ಲೆಯ ಜಾಬ್ರಿ ರೈಲು ನಿಲ್ದಾಣದ ಸಮೀಪವಿರುವ ಸ್ಫೋಟ ನಡೆದಿದ್ದು, ಇಂದು ಅಲ್ಲಿಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎನ್‌ಐಎ ಅಧಿಕಾರಿಗಳು ಮಧ್ಯಪ್ರದೇಶ ಪೊಲೀಸರ ಜೊತೆ ಸಮಾಲೋಚನೆ ನಡೆಸಲಿದ್ದು, ಅವರ ಬಳಿಯಿರುವ ಸುಳಿವುಗಳನ್ನು ಪರಿಶೀಲಿಸಿ ಇದೊಂದು ಭಯೋತ್ಪಾದಕ ಕೃತ್ಯವೇ ಎಂಬುದನ್ನು ದೃಢಪಡಿಸಿಕೊಳ್ಳಲಿರುವರು.
ಜಾಬ್ರಿ ರೈಲು ನಿಲ್ದಾಣದ ಬಳಿ ನಡೆದ ರೈಲು ಸ್ಫೋಟ ಘಟನೆಯು ಭಯೋತ್ಪಾದಕ ಕೃತ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆಯೆಂದು ಮಧ್ಯಪ್ರದೇಶ ಗೃಹ ಸಚಿವ ಭೂಪೇಂದ್ರ ಸಿಂಗ್ ಗುರುವಾರ ತಿಳಿಸಿದ್ದರು.
ಭೋಪಾಲ್-ಉಜ್ಜಯಿನಿ ಪ್ರಯಾಣಿಕ ರೈಲಿನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದು, ಅವರ ಮೂವರ ಪರಿಸ್ಥಿತಿ ಗಂಭೀರವಾಗಿದೆ. ಸುಧಾರಿತ ಸ್ಫೋಟಕ ಸಾಧನದ ಮೂಲಕ ಈ ಸ್ಫೋಟವನ್ನು ನಡೆಸಲಾಗಿದೆಯೆಂದು ಮಧ್ಯಪ್ರದೇಶದ ಪೊಲೀಸ್ ಮಹಾನಿರೀಕ್ಷಕ (ಗುಪ್ತಚರ) ಮಕರಂದ್ ದಿಯೋಸ್ಕರ್ ತಿಳಿಸಿದ್ದಾರೆ.