ಉಡುಪಿ: ಜ್ಯುವೆಲ್ಲರಿಗೆ ನುಗ್ಗಿ ಬೆಳ್ಳಿಯ ಆಭರಣ ಕಳವು

ಉಡುಪಿ, ಮಾ.8: ಕಲ್ಸಂಕ -ಗುಂಡಿಬೈಲು ರಸ್ತೆಯ ಅಂಬಾಗಿಲು ಎಂಬಲ್ಲಿರುವ ವಾಣಿಜ್ಯ ಸಂಕೀರ್ಣದ ಎರಡು ಅಂಗಡಿಗಳಿಗೆ ಜು.7ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಟ್ಟಡದ ನೆಲ ಅಂತಸ್ತಿನಲ್ಲಿರುವ ದಿನೇಶ್ ರಾವ್ ಎಂಬವರ ದೀಪಕ್ ಜ್ಯುವೆಲ್ಲರ್ ಅಂಗಡಿಯ ಶಟರ್ ಮುರಿದು ಒಳಗಿನ ಅಲ್ಯೂಮೀನಿಯಂ ಫ್ರೇಮ್ ಡೋರ್‌ನ ಲಾಕ್ ತೆಗೆದು ಒಳನುಗ್ಗಿದ ಕಳ್ಳರು ಡ್ರಾವರ್ ಹಾಗೂ ಶೋಕೇಸಿನಲ್ಲಿದ್ದ 2ಕೆ.ಜಿ. 140ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ವೌಲ್ಯ 90,000ರೂ. ಎಂದು ಅಂದಾಜಿಸಲಾಗಿದೆ.
ಜ್ಯುವೆಲ್ಲರಿಯ ಪಕ್ಕದ ಹರೀಶ್ ಎಂಬವರ ಫೋಟೋ ಟಚ್ ಡಿಜಿಟಲ್ ಸ್ಟುಡಿಯೋ ಅಂಗಡಿಯ ಶಟರ್ ಮುರಿದು ಒಳನುಗ್ಗಿ ಕಳವಿಗೆ ಯತ್ನಿಸಿದ್ದಾರೆ. ಆದರೆ ಸ್ಟುಡಿಯೋದಿಂದ ಯಾವುದೇ ಸೊತ್ತುಗಳು ಕಳವಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿರುವ ಶ್ವಾನದಳ ಹಾಗೂ ಬೆರಳಚ್ಚು ತಜ್ಞ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





