ಕಾರ್ಕಳ-ಆನೆಕೆರೆಯಲ್ಲಿ ಗರೋಡಿಗಳ ಗುರಿಕಾರರ ಸಭೆ

ಕಾರ್ಕಳ, ಮಾ.8: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಶ್ರಯದಲ್ಲಿ ಎ.23ರಂದು ಉಡುಪಿಯ ಪುರಭವನದಲ್ಲಿ ನಡೆಯಲಿರುವ ಉಡುಪಿ ಜಿಲ್ಲಾ ವ್ಯಾಪ್ತಿಯ ಗರೋಡಿಗಳ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಬಗ್ಗೆ ಕಾರ್ಕಳ ತಾಲೂಕು ವ್ಯಾಪ್ತಿಯ ಗರೋಡಿಗಳ ಗುರಿಕಾರರ ಪೂರ್ವಭಾವಿ ಸಭೆ ಇಲ್ಲಿನ ಬೈಲಡ್ಕ-ಆನೆಕೆರೆ ಶ್ರೀಬ್ರಹ್ಮಬೈದರ್ಕಳ ಗರೋಡಿ ಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಗರೋಡಿಗಳ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಔಚಿತ್ಯ ಹಾಗೂ ಕಾರ್ಯಕ್ರಮದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ವಿವಿಧ ಗರೋಡಿಗಳ ಗುರಿಕಾರರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಬೈಲಡ್ಕ-ಆನೆಕಲ್ಲು ಶ್ರೀಬ್ರಹ್ಮಬೈದರ್ಕಳ ಗರೋಡಿ ಕಾರ್ಕಳ ಆಡಳಿತ ಮೊಕ್ತೇಸರ ವಿನಾಯಕ ಚಂದರ್, ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಆಡಳಿತ ಮೊಕ್ತೇಸರ ಮೋಹನ್ ಪಾತ್ರಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಉಪಾಧ್ಯಕ್ಷ ಮಹೇಶ್ ಕುಮಾರ್, ಗೌರವ ಸಲಹೆಗಾರ ರಾಜು ಪೂಜಾರಿ, ಕೋಶಾಧಿಕಾರಿ ಕುಶಲ್ ಕರ್ಕೇರ, ಕಾರ್ಕಳ ವಲಯ ಸಂಚಾಲಕ ಪ್ರದೀಪ್ ಸನಿಲ್ ಪಳ್ಳಿ, ಆಡಳಿತ ಸಮಿತಿ ಸದಸ್ಯ ಸಂದೀಪ್ ಪಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಸ್ಥಾಪಕ ಉಪಾಧ್ಯಕ್ಷ ಸುನಿಲ್ ಕೆ.ಆರ್. ಕಾರ್ಕಳ ಸ್ವಾಗತಿಸಿದರು. ಗೌರವ ಸಲಹೆಗಾರ ಎ.ಶಿವಕುಮಾರ್ ಅಂಬಲಪಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಲ್ಮಾಡಿ ಕಾರ್ಯಕ್ರಮ ನಿರೂಪಿಸಿದರು.







