ಕಾಡಾನೆ ದಾಂದಲೆ: ಅಪಾರ ನಷ್ಟ

ಮೂಡಿಗೆರೆ, ಮಾ.8: ಊರುಬಗೆ ಗ್ರಾಮವ್ಯಾಪ್ತಿಯಲ್ಲಿ ಕಾಡಾನೆಗಳು ನಿರಂತರ ಲಗ್ಗೆಯಿಡುತ್ತಿದ್ದು ಬುಧವಾರ ಊರುಬಗೆಯ ನಂದೀಶ್ ಎಂಬವರ ಹಿಡುವಳಿ ಜಮೀನಿಗೆ ನುಗ್ಗಿ ಅಡಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿ ಅಪಾರ ಬೆಳೆನಷ್ಟವಾಗಿದೆ.
ಅರಣ್ಯವ್ಯಾಪ್ತಿಯಿಂದ ಹೊರಬರುತ್ತಿರುವ ಕಾಡಾನೆಗಳು ರೈತರ ಜಮೀನಿಗೆ ನಿರಂತರ ಲಗ್ಗೆಯಿಡುತ್ತಿವೆ. ರಾತ್ರಿವೇಳೆ ಗ್ರಾಮದಿಂದ ಗ್ರಾಮಕ್ಕೆ ದೌಡಾಯಿಸುತ್ತಿದ್ದು ಭತ್ತದ ಗದ್ದೆಗಳಷ್ಟೇ ಅಲ್ಲದೆ, ವಾಣಿಜ್ಯ ಬೆಳೆಗಳಾದ ಕಾಫಿಗಿಡಗಳನ್ನು ತುಳಿದು, ಬಾಳೆ ಇತ್ಯಾದಿ ಬೆಳೆಗಳನ್ನು ನಾಶಪಡಿಸುತ್ತಿವೆ.
ಆನೆಗಳು ಅರಣ್ಯದಿಂದ ಹೊರಬಾರದಂತೆ ತಡೆಗಟ್ಟಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅರಣ್ಯ ಸಿಬ್ಬಂದಿಗಳು ಕಾಡಾನೆಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಓಡಿಸುವ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಸಿದ್ದಾರೆ ಹೊರತು, ಆನೆಗಳು ಹೊರಬಾರದಂತೆ ಅರಣ್ಯದಂಚಿನ ಪ್ರದೇಶದಲ್ಲಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿಲ್ಲ.
ಸುತ್ತಮುತ್ತಲ ಗ್ರಾಮಸ್ಥರು ಸದಾ ಆತಂಕದ ಮಡುವಿನಲ್ಲಿ ದಿನದೂಡುವಂತಾಗಿದೆ. ಜಾನುವಾರುಗಳನ್ನು ಸರಿಯಾಗಿ ಮೇಯಲು ಬಿಡುವಂತಿಲ್ಲ. ಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಳ್ಳುತ್ತಿದೆ. ಆನೆಗಳಿಂದ ರೈತರಿಗೆ ಉಂಟಾಗುತ್ತಿರುವ ನಷ್ಟಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು ಕೂಡಲೇ ಸೂಕ್ತ ಪರಿಹಾರ ನೀಡಿ ಮುಂದಿನ ವ್ಯವಸಾಯಕ್ಕೆ ಹಾಗೂ ಜೀವನಕ್ಕೆ ಅನುಕೂಲ ಕಲ್ಪಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.







