ಬಡವರ ಕಾಳಜಿ ಇಲ್ಲದ ಮೋದಿ ಶ್ರೀಮಂತರ ಪ್ರಧಾನಿ: ಶಾಸಕ ಜೈನ್

ಮುಲ್ಕಿ, ಮಾ.8: ಮೋದಿ ನೇತ್ರತ್ವದ ಕೇಂದ್ರ ಸರಕಾರ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದು ಬಂಡವಾಳ ಶಾಹಿಗಳ ಕೈಗೊಂಬೆಯಾಗಿದೆ ಎಂದು ಮುಲ್ಕಿ ಮೂಡಬಿದಿರೆ ಕ್ಷೇತ್ರ ಶಾಸಕ ಅಭಯಚಂದ್ರ ಹೇಳಿದ್ದಾರೆ.
ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಯೂತ್ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಸಮಿತಿಗಳ ನೇತ್ರತ್ವದಲ್ಲಿ ಕೇಂದ್ರ ಸರಕಾರ ದಿನನಿತ್ಯ ಅವಶ್ಯಕ ವಸ್ತುಗಳ ಬೆಲೆಯೆರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಲ್ಕಿಯ ವಿಶೇಷ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯೇರಿಸುವ ಮೂಲಕ ಬಡವರ ಅನ್ನಕ್ಕೆ ಕನ್ನ ಹಾಕುತ್ತಿದೆ. ಈಗ ಏರಿಸಿರುವ ಅಡುಗೆ ಅನಿಲ ದರವನ್ನು ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಗ್ಯಾಸ್ ನೀಡಿ ಜನರಿಗೆ ನೀಡಿದ ಆಶ್ವಾಸನೆಯನ್ನು ಪೂರ್ತಿಗೊಳಿಸುವಂತೆ ಆಗ್ರಹಿಸಿದರು.
ಪ್ರಧಾನಿ ಮೋದಿಯವರು ಐಷರಾಮಿ ಜೀವನವನ್ನು ನಡೆಸುತ್ತಿದ್ದು ಹೆಚ್ಚಿನ ಸಮಯಗಳನ್ನು ವಿದೇಶ ಪ್ರಯಾಣದಲ್ಲಿ ಮತ್ತು ಶ್ರೀಮಂತರೊಂದಿಗೆ ಕಳೆಯುತ್ತಿದ್ದಾರೆ. ಕೋಟ್ಯಂತರ ರೂ. ಬೆಲೆಬಾಳುವ ವಾಚ್ ಧರಿಸಿ ಮೂರು ಗಂಟೆಗೊಮ್ಮೆ ಬಟ್ಟೆ ಬದಲಾಯಿಸುತ್ತಿರುವ ಮೋದಿ ಶ್ರೀಮಂತರ ಪ್ರಧಾನಿ ಎಂದು ವ್ಯಂಗ್ಯವಾಡಿದ ಶಾಸಕರು, ಇವರಿಗೆ ಮತ್ತು ಇವರ ಸರಕಾರಕ್ಕೆ ಬಡ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಯುಪಿಎ ಸರಕಾರದ ಅವಧಿಯಲ್ಲಿ 400 ರೂ.ಗೆ ಸಿಗುತ್ತಿದ್ದ ಗ್ಯಾಸ್ ದರ ಪ್ರಸ್ತುತ 700 ರೂ.ಗೆ ತಲುಪಿದ್ದು ಬಡ ಜನರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ದಿನ ಬಳಕೆಯ ವಸ್ತುಗಳ ದರ ಗಗನಕ್ಕೇರಿದ್ದು ಎಲ್ಲಾ ರೀತಿಯಲ್ಲಿ ಕೇಂದ್ರ ಸರಕಾರ ಬಡವರ ವಿರೋಧಿಯಾಗಿದೆ ಎಂದು ಟೀಕಿಸಿದರು.
ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆ ಖಂಡನೀಯ ಎಂದು ಹೇಳಿದ ಜೈನ್, ಮೋದಿ ಸರಕಾರದಲ್ಲಿ ಬಂಡವಾಳಶಾಹಿಗಳಿಗೆ ಮಾತ್ರ ಅಚ್ಚೇಇನ್ ಎಂದು ವ್ಯಂಗ್ಯವಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪ್ರಧಾನಿ ಮೋದಿಯವರು ಹಿಂದು ಮತ್ತು ಮುಸ್ಲಿಮರ ನಡುವೆ ಜಾತಿಯ ಕಂದಕ ನಿರ್ಮಿಸುವ ಕಾರ್ಯ ಮಾಡುತ್ತಿದ್ದಾರೆ. ಮೋದಿ ಆಡಳಿತದಿಂದ ಕಂಗೆಟ್ಟು ರೊಚ್ಚಿಗೆದ್ದಿರುವ ಮಹಿಳೆಯರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮುಲ್ಕಿಯ ಕಾರ್ನಾಡು ಪೇಟೆಯಿಂದ ಮುಲ್ಕಿ ವಿಶೇಷ ತಹಶೀಲ್ದಾರ್ ಕಚೇರಿಯವರೆಗೆ ಗ್ಯಾಸ್ ಸಿಲಿಂಡರ್ ಮತ್ತು ಪಾತ್ರೆಗಳನ್ನು ಹಿಡಿದು ಪ್ರತಿಭಟನಾ ರ‍್ಯಾಲಿ ನಡೆಸಿದ ಪ್ರತಿಭಟನಾ ಕಾರರು, ಕೇಂದ್ರ ಸರಕಾರದ ದುರಾಡಳಿತ, ಅಗತ್ಯ ವಸ್ತುಗಳ ಬೆಲೇರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಹಕೀಂ ಮುಲ್ಕಿ, ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್, ಸದಸ್ಯರಾದ ಪುತ್ತು ಬಾವ, ವಿಮಲಾ ಪೂಜಾರಿ,ಬಶೀರ್ ಕುಳಾಯಿ,ಅಬ್ದುಲ್ ರಝಾಕ್ ಕದಿಕೆ, ಅನಿತಾ ರಝಾನೆಟ್ ಕಿನ್ನಿಗೋಳಿ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೊಮಿನಾ ಸಿಕ್ವೇರಾ, ಭೀಮಾ ಶಂಕರ ಕೆ.ಎಸ್ ರಾವ್ ನಗರ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಸಾಹುಲ್ ಹಮೀದ್, ದಯಾನಂದ ಮಟ್ಟು ಮತ್ತಿತರಿದ್ದರು.







