ತುಮಕೂರು: ಮಹಿಳಾ ಖೈದಿಗಳಿಂದ ಪರಿಸರ ಸ್ನೇಹಿ ಬ್ಯಾಗ್ ತಯಾರಿಕೆ

ತುಮಕೂರು,ಮಾ.8:ತುಮಕೂರು ನಗರದಲ್ಲಿರುವ ಮಹಿಳಾ ಬಂದಿಖಾನೆಯ ಮಹಿಳಾ ಖೈದಿಗಳು ಇನ್ನು ಮುಂದೆ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ತಯಾರಿಸಲಿದ್ದಾರೆ ಎಂದು ಬಂದಿಖಾನೆಯ ಡಿಜಿ ಮತ್ತು ಐಜಿ ಸತ್ಯನಾರಾಯಣರಾವ್ ತಿಳಿಸಿದ್ದಾರೆ.
ತುಮಕೂರು ನಗರದಲ್ಲಿಂದು ಬಂದಿಖಾನೆಯಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಹಾತ್ಮಗಾಂಧಿ ಗ್ರಾಮೀಣ ಮತ್ತು ಇಂಧನ ಅಭಿವೃದ್ಧಿ ಸಂಸ್ಥೆಯು ಸೋಲಾರ್ ಶಕ್ತಿಯ ಹೊಲಿಗೆಯಂತ್ರಗಳ ಮೂಲಕ ಬ್ಯಾಗ್ ತಯಾರಿಸುವ ಕುರಿತು ಕಳೆದ ಒಂದು ವಾರದಿಂದ ಇಲ್ಲಿನ ಖೈದಿಗಳಿಗೆ ತರಬೇತಿ ನೀಡಲಾಗಿದೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಬೆಲೆಯನ್ನು ನಿಗಧಿಪಡಿಸಿ ಮಾರುಕಟ್ಟೆಯನ್ನು ರೂಪಿಸಲಾಗುವುದು ಎಂದ ಅವರು,ಬೇಕರಿ ಪದಾರ್ಥಗಳನ್ನು ತಯಾರಿಸುವ ಘಟಕವನ್ನು ಈ ಜೈಲಿನಲ್ಲಿ ಸ್ಥಾಪಿಸಲಾಗುವುದು.ಬೇಕರಿ ಪದಾರ್ಥಗಳನ್ನು ಖೈದಿಗಳು ತಯಾರಿಸಲಿದ್ದು,ಒಂದು ತಿಂಗಳೊಳಗೆ ಕಾರ್ಯಾರಂಭ ಮಾಡಲಿದೆ ಎಂದು ಸತ್ಯನಾರಾಯಣರಾವ್ ತಿಳಿಸಿದರು.
ಈ ಬಂದಿಖಾನೆಯಲ್ಲಿ ಸದ್ಯ 88 ಮಹಿಳಾ ಖೈದಿಗಳಿದ್ದು, ಕೌಶಲ್ಯ, ಅರೆಕೌಶಲ್ಯ ಮತ್ತು ಕೌಶಲ್ಯರಹಿತ ಖೈದಿಗಳಿಗೆ ಕ್ರಮವಾಗಿ ರೂ. 90, ರೂ.80 ಹಾಗೂ ರೂ.70 ಗಳನ್ನು ಕೂಲಿಯಾಗಿ ಪಾವತಿಸಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್,ಬಂದಿಖಾನೆಯ ಸೂಪರಿಂಟೆಂಡೆಂಟ್ ಲತಾ ಮತ್ತಿತರರು ಹಾಜರಿದ್ದರು.







