ಇಂದು ಕಿಡ್ನಿ ರೋಗಿಗಳ ಪ್ರತಿನಿಧಿ ಸಮಾವೇಶ
ಮಂಗಳೂರು, ಮಾ.8: ಕಿಡ್ನಿ ಆರೋಗ್ಯ ಅಭಿಯಾನ ದ.ಕ. ಜಿಲ್ಲಾ ಸಂಘಟನಾ ಸಮಿತಿ, ಮಂಗಳೂರು ನೆಪ್ರೋ ಯುರೋಲಜಿ ಚಾರಿಟೇಬಲ್ ಟ್ರಸ್ಟ್, ಕಿಡ್ನಿ ರೋಗಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಮಾ.9ರಂದು ಕಿಡ್ನಿ ರೋಗಿಗಳ ಪ್ರತಿನಿಧಿ ಸಮಾವೇಶ ನಗರದ ಬಲ್ಮಠ ಳ್ನೀರ್‌ನ ಸಮೀಪದಲ್ಲಿರುವ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ಗಣೇಶ್ ರಾವ್ ಹೇಳಿದರು.
ಅವರು ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10:30ರಿಂದ ನಡೆಯಲಿರುವ ಸಮಾವೇಶದಲ್ಲಿ ಕಿಡ್ನಿ ರೋಗಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೂತನ ಯೋಜನೆಗಳನ್ನು ರೂಪಿಸುವಂತೆ ಹಾಗೂ ಕಿಡ್ನಿ ವೈಲ್ಯವನ್ನು ತಡೆಯುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಒತ್ತಾಯಿಸುವ ಪ್ರಮುಖ ನಿರ್ಣಯಗಳನ್ನು ಮಂಡಿಸಲಿದೆ. ಅವುಗಳ ಅನುಷ್ಠಾನಕ್ಕೆ ಸಮಿತಿಯು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮನವೊಲಿಸಲಿದೆ ಎಂದರು.
ಸಮಾವೇಶವನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಸಚಿವ ಯು.ಟಿ.ಖಾದರ್ ಅಂಗಾಂಗ ದಾನಿಗಳನ್ನು ಸನ್ಮಾನಿಸಲಿದ್ದಾರೆ. ಖ್ಯಾತ ಕಿಡ್ನಿ ರೋಗ ತಜ್ಞ ಕೊಯಂಬತ್ತೂರಿನ ಡಾ. ವಿವೇಕ್ ಪಾಠಕ್ ‘ಕಿಡ್ನಿ ಕಾಯಿಲೆ ಮತ್ತು ಬೊಜ್ಜು’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿ, ರೋಗಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಹಲವಾರು ವೈದ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ ಸಮಿತಿಯ ಸುದೇಶ್ ಕುಮಾರ್, ಡಾ. ಮುಹಮ್ಮದ್ ಸಲೀಂ, ವಿ.ಎಂ. ರಿಯಾಝ್, ಉಮ್ಮರ್ ಯು.ಎಚ್. ಉಪಸ್ಥಿತರಿದ್ದರು.





