ಬರ ರಾಜಕೀಯ ಬಿಟ್ಟು ಕಷ್ಟಕ್ಕೆ ಸ್ಪಂದಿಸಿ: ಜಿಗಜಿಣಗಿ
ಉಡುಪಿ, ಮಾ.8: ಬರ ಪರಿಹಾರದಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಎಲ್ಲದಕ್ಕೂ ಕೇಂದ್ರ ಸರಕಾರದ ಮೇಲೆ ಬೆಟ್ಟು ಮಾಡುವುದಲ್ಲ. ಬರದ ವಿಷಯದಲ್ಲಿ ಕೇಂದ್ರಕ್ಕಿಂತ ರಾಜ್ಯ ಸರಕಾರದ ಜವಾಬ್ದಾರಿ ಹೆಚ್ಚಿದೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡದೆ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ಸಚಿವ ರಮೇಶ್ ಸಿ.ಜಿಗಜಿಣಗಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕರಾವಳಿ ಕರ್ನಾಟಕ ಸೇರಿದಂತೆ ಇಡೀ ರಾಜ್ಯ ಬರಗಾಲಕ್ಕೆ ತುತ್ತಾಗಿದೆ. ಬರ ಪರಿಹಾರವಾಗಿ ಕೇಂದ್ರ ಸರಕಾರ ಈ ಬಾರಿ 1,782 ಕೋ.ರೂ. ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಇನ್ನು ಬೇಕಾದರೆ ಒದಗಿಸುತ್ತದೆ. ರಾಜ್ಯ ಸರಕಾರ ಸಲ್ಲಿಸಿದ ಬೇಡಿಕೆಯಂತೆ ಅನುದಾನ ಮಂಜೂರು ಮಾಡಲಾಗಿದೆ. ಅಲ್ಲದೆ ಮಾರ್ಚ್ ಕೊನೆಯಲ್ಲಿ ಬೇರೆ ರಾಜ್ಯದವರು ಹಣ ಬಳಕೆ ಮಾಡದೆ ಉಳಿದ ಹಣವನ್ನು ರಾಜ್ಯಕ್ಕೆ ನೀಡುವುದಾಗಿ ಹೇಳಿದ್ದೇವೆ. ಅದಕ್ಕೆ ಬೇಕಾದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಎಸ್.ಎಂ.ಕೃಷ್ಣ, ಅಂಬರೀಷ್, ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಉತ್ತಮ ಬೆಳವಣಿಗೆ. ಇವರೆಲ್ಲ ನಮ್ಮ ಸ್ನೇಹಿತರು. ಇವರು ಪಕ್ಷಕ್ಕೆ ಬಂದರೆ ಪಕ್ಷ ಇನ್ನಷ್ಟು ಬೆಳವಣಿಗೆ ಕಾಣುತ್ತದೆ ಎಂದರು.





