ಭಾರತ ವಿರುದ್ಧ ಟೆಸ್ಟ್ ಸರಣಿ: ಮಿಚೆಲ್ ಮಾರ್ಷ್ ಅಲಭ್ಯ
ಹೊಸದಿಲ್ಲಿ, ಮಾ.8: ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಭುಜ ನೋವಿನಿಂದಾಗಿ ಈಗ ನಡೆಯುತ್ತಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಕೋಚ್ ಡರೆನ್ ಲೆಹ್ಮನ್ ಈ ಬೆಳವಣಿಗೆಯನ್ನು ಬುಧವಾರ ದೃಢಪಡಿಸಿದ್ದು, ಶೀಘ್ರವೇ ಮಾರ್ಷ್ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಪುಣೆ ಹಾಗೂ ಬೆಂಗಳೂರಿನಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯದ ನಾಲ್ಕು ಇನಿಂಗ್ಸ್‌ಗಳಲ್ಲಿ 4, 31, 0 ಹಾಗೂ 13 ರನ್ ಗಳಿಸಿದ್ದ ಮಾರ್ಷ್ 2ನೆ ಟೆಸ್ಟ್ ಪಂದ್ಯಗಳಲ್ಲಿ ಕೇವಲ 5 ಓವರ್ ಬೌಲಿಂಗ್ ಮಾಡಿದ್ದರು. ಮೊದಲ ಟೆಸ್ಟ್‌ನಲ್ಲಿ ಬೌಲಿಂಗನ್ನೇ ಮಾಡಿರಲಿಲ್ಲ. ಗಾಯದ ಸಮಸ್ಯೆ ಎದುರಿಸುತ್ತಿರುವ ಮಾರ್ಷ್ ಭಾರತ ಪ್ರವಾಸದ ಮಧ್ಯೆ ಸ್ವದೇಶಕ್ಕೆ ವಾಪಸಾಗುತ್ತಿದ್ದಾರೆ. ರಾಂಚಿ ಹಾಗೂ ಧರ್ಮಶಾಲಾದಲ್ಲಿ ನಡೆಯಲಿರುವ ಉಳಿದೆರಡು ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ.
‘‘ಭುಜನೋವು ಅನುಭವಿಸುತ್ತಿರುವ ಮಾರ್ಷ್ ಮೆಲ್ಬೋರ್ನ್‌ಗೆ ವಾಪಸಾಗಲಿದ್ದಾರೆ. ನಾವು ಮುಂದಿನ ಕೆಲವೇ ದಿನಗಳಲ್ಲಿ ಬದಲಿ ಆಟಗಾರನನ್ನು ನಿರ್ಧರಿಸಲಿದ್ದೇವೆ. ಆ ಬಳಿಕ ಅಂತಿಮ 11ರ ಬಳಗವನ್ನು ಆಯ್ಕೆ ಮಾಡುತ್ತೇವೆ’’ ಎಂದು ಲೆಹ್ಮನ್ ಹೇಳಿದ್ದಾರೆ.
ಆಸೀಸ್ ತಂಡ ಆಟಗಾರರ ಗಾಯದ ಭೀತಿಯನ್ನು ಎದುರಿಸುತ್ತಿದ್ದು, ಆಫ್-ಸ್ಪಿನ್ನರ್ ನಥಾನ್ ಲಿಯೊನ್ ಬೌಲಿಂಗ್ ಮಾಡುವ ಕೈಬೆರಳಿಗೆ ಗಾಯವಾಗಿದೆ. 3ನೆ ಟೆಸ್ಟ್ ಆರಂಭವಾಗಲು ಇನ್ನೊಂದು ವಾರ ಬಾಕಿಯಿದೆ. ಆಟಗಾರರಿಗೆ ಚೇತರಿಸಿಕೊಳ್ಳಲು ಸಮಯಾವಕಾಶವಿದೆ.







