ಶಿವಸೇನೆ ನೈತಿಕ ಪೊಲೀಸ್‌ಗಿರಿ ತಡೆಯಲು ವಿಫಲ : ಕೇರಳದಲ್ಲಿ ಹತ್ತು ಪೊಲೀಸರ ಅಮಾನತು

ಕೊಚ್ಚಿನ್,ಮಾ.9: ಬುಧವಾರ ಸಂಜೆ ಇಲ್ಲಿನ ಮೆರೈನ್ ಡ್ರೈವ್ ಫುಟ್‌ಬಾತ್ ಬಳಿ ಕುಳಿತಿದ್ದ ಜೋಡಿಯ ಮೇಲೆ ಶಿವಸೇನೆ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಎಸಗಿದ ಪ್ರಕರಣ ಇದೀಗ ಹತ್ತು ಪೊಲೀಸರ ವಿರುದ್ಧದ ಶಿಸ್ತುಕ್ರಮಕ್ಕೆ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದರೂ, ಇದನ್ನು ತಡೆಯಲು ವಿಫಲವಾದ ಆರೋಪದಲ್ಲಿ ಸಬ್ ಇನ್‌ಸ್ಪೆಕ್ಟರ್ ಹಾಗೂ ಇತರ ಎಂಟು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಶಿವಸೇನೆ ಕಾರ್ಯಕರ್ತರು "ಸ್ಟಾಪ್ ಲವ್ ಅಂಡರ್ ಅಂಬ್ರೆಲ್ಲಾ" ಹೆಸರಿನಲ್ಲಿ ಬುಧವಾರ ಬೃಹತ್ ಮೆರವಣಿಗೆ ಆಯೋಜಿಸಿದ್ದರು. ಆ ವೇಳೆ ವಾಕ್ ವೇ ಬಳಿ ಕುಳಿತಿದ್ದ ಜೋಡಿಯನ್ನು ನಿಂದಿಸಿ, ತಕ್ಷಣ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಿದರು. ಆಗ ಕೆಲ ಕಾರ್ಯಕರ್ತರು ಬೆತ್ತದಿಂದ ಆ ಜೋಡಿಯನ್ನು ಥಳಿಸಿ, ಇನ್ನೆಂದೂ ಇಲ್ಲಿಗೆ ಬರಬಾರದು ಎಂದು ತಾಕೀತು ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ. ತಕ್ಷಣ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.
ಘಟನೆ ಸಂಬಂಧ ಆರು ಶಿವಸೇನೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸಾರ್ವಜನಿಕವಾಗಿ ಕಿಡಿಗೇಡಿತನ ಪ್ರದರ್ಶಿಸಿದ್ದು ಹಾಗೂ ಪೊಲೀಸ್ ಅನುಮತಿ ಇಲ್ಲದೇ ಮೆರವಣಿಗೆ ನಡೆಸಿದ ಆರೋಪ ಹೊರಿಸಲಾಗಿದೆ. ಆದರೆ ಕಿರುಕುಳದ ಬಗ್ಗೆ ಯಾರೂ ಇದುವರೆಗೆ ದೂರು ನೀಡಿಲ್ಲ. ಕೆಲ ದಿನಗಳ ಹಿಂದೆ ಹೀಗೆ ವಾಕ್‌ವೇ ಬಳಿ ಕುಳಿತಿದ್ದ ಜೋಡಿಗೆ ಶಿವಸೇನೆ ಕಾರ್ಯಕರ್ತರು ಬೆದರಿಕೆ ಹಾಕಿದ್ದರಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರೇಮಿಗಳ ದಿನದಂದು ಅಳೀಕ್ಕಲ್ ಬೀಚ್‌ನಲ್ಲಿ ಇದ್ದ ಈ ಜೋಡಿಗೆ ಶಿವಸೇನೆ ಕಾರ್ಯಕರ್ತರು ಕಿರುಕುಳ ನೀಡಿದ್ದ ವೀಡಿಯೊ ವೈರಲ್ ಆಗಿತ್ತು.