ಜಿದ್ದಾ: ಎನ್‌ಆರ್‌ಐ ಕಬಡ್ಡಿ ಲೀಗ್ ಗೆ ಕ್ಷಣಗಣನೆ

ಜಿದ್ದಾ, ಮಾ,9: ಸಾಕೊ (SACQO) ಹಾಗೂ ಭಟ್ಕಳ ಕಮ್ಯುನಿಟಿ ಸಹಯೋಗದೊಂದಿಗೆ ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಆಯೋಜಿಸುತ್ತಿರುವ ಕಬಡ್ಡಿ ಲೀಗ್- 2017ರ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್ 10ರ ಸಂಜೆ 4 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ.
ಪ್ರಧಾನ ರಾಯಭಾರಿ ನೂರ್ ಮುಹಮ್ಮದ್ ಶೇಖ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಐಪಿಡಬ್ಲುಎಫ್ ಪ್ರಧಾನ ಕಾರ್ಯದರ್ಶಿ ಖಾದರ್ ಖಾನ್, ಅಲ್ ಮುಝೈನ್‌ನ ಮಾಲೀಕ ಬಜ್ಪೆ ಝಕರಿಯಾ ಮತ್ತು ಇತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಾಕೊ, ಭಟ್ಕಳ ಕಮ್ಯುನಿಟಿ, ವೈಟ್ ಸ್ಟೋನ್, ಎನರ್ಜ್ಯ ಅಲ್ ಫಾರಿಸ್, ಅಲ್ ಮುಝೈನ್, ಕರಾವಳಿ ವೆಲ್ಫೇರ್ ಅಸೋಸಿಯೇಶನ್ ರಿಯಾದ್ (KWAR), ಮಂಕಿ ಕಮ್ಯುನಿಟಿ ಜಿದ್ದಾ ಹಾಗೂ ಜಿದ್ದಾ ತಮಿಳು ತಂಡರ್ಸ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಪೂಲ್ ಎ, ಪೂಲ್ ಬಿ, ಪೂಲ್ ಸಿ ಎಂದು ಮೂರು ವಿಭಾಗಗಳಾಗಿ ತಂಡಗಳನ್ನು ವಿಂಗಡಿಸಲಾಗಿದ್ದು, ಲೀಗ್ ಹಂತದಲ್ಲಿ ಪ್ರತೀ ತಂಡವು ತಲಾ ಎರಡು ಪಂದ್ಯವನ್ನು ಆಡಲಿದೆ. ಆಯಾ ಪೂಲ್‌ಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ದ್ವಿತೀಯ ಸ್ಥಾನ ಪಡೆದ ತಂಡಗಳ ನಡುವೆ ನಾಕೌಟ್ ಸುತ್ತಿನ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಹೆಚ್ಚಿನ ಅಂಕಗಳಿಸಿದ ತಂಡವು ಸೆಮಿಫೈನಲ್ ಪ್ರವೇಶಿಸಲಿದೆ.
ಈಗಾಗಲೇ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡಗಳು ಸಿದ್ಧತೆಯಲ್ಲಿ ತೊಡಗಿದ್ದು, ಚಾಂಪಿಯನ್ ಸ್ಥಾನವನ್ನು ಮುಡಿಗೇರಿಸಿಕೊಳ್ಳುವ ಪೈಪೋಟಿಯಲ್ಲಿವೆ. ಭಾರತದ ವಿವಿಧ ರಾಜ್ಯಗಳ ಅನಿವಾಸಿ ಭಾರತೀಯ ಆಟಗಾರರು ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಈ ಮಟ್ಟದ ಅದ್ಧೂರಿ ಕಬಡ್ಡಿ ಪಂದ್ಯಾವಳಿಯು ನಡೆಯುತ್ತಿರುವುದು ಜನರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ತವರಿನಲ್ಲೂ ಕಬಡ್ಡಿ ಲೀಗ್ ಕುರಿತು ಜನರು ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಕಲ್ಲಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







