ದಾದಿ ಎಂದು ಪರಿಚಯಿಸಿಕೊಂಡ ಯುವತಿಯಿಂದ ನವಜಾತ ಶಿಶುವಿನ ಅಪಹರಣ

ಪತ್ತನಂತಿಟ್ಟ,ಮಾ.9: ಕೊಯಂಚೇರಿ ಜಿಲ್ಲಾ ಆಸ್ಪತ್ರೆಯಿಂದ ಜವಜಾತ ಶಿಶುವನ್ನು ದಾದಿಯೆಂದು ಪರಿಚಯಿಸಿಕೊಂಡ ಯುವತಿ ಅಪಹರಿಸಿದ್ದಾಳೆ. ನಿನ್ನೆ ಬೆಳಗ್ಗೆ ಹತ್ತು ಗಂಟೆಗೆ ಘಟನೆ ನಡೆದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾನ್ನಿಯ ಪಾಡತ್ತುಂಪಡಿ ಎಂಬಲ್ಲಿನ ಸಜಿ-ಅನಿತಾ ದಂಪತಿಯ ಮೂರು ದಿನಗಳ ವಯಸ್ಸಿನ ಗಂಡು ಮಗುವನ್ನು ಇಂಜೆಕ್ಷನ್ ನೀಡಲಿಕ್ಕಿದೆ ಎಂದು ಹೇಳಿ ಎತ್ತಿಕೊಂಡು ಹೋದ ಯುವತಿ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ. ಸುಮಾರು ಮೂವತ್ತು ವರ್ಷದ ಯುವತಿ ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆಂದು ಸಜಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಯುವತಿ ಆಸ್ಪತ್ರೆಯ ಯೂನಿಫಾರ್ಮ್ ಧರಿಸಿರಲಿಲ್ಲ.
ಮಗು ಅಪಹರಣದ ಸುದ್ದಿ ತಿಳಿದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಆಸ್ಪತ್ರೆಯ ನೌಕರರಿಗೆ ಗೊತ್ತಿದ್ದೇ ಈ ಘಟನೆ ನಡೆದಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗು ಅಪಹರಣದ ವೇಳೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ದಾದಿಯರಿಂದ ಪೊಲೀಸರು ಹೇಳಿಕೆ ಪಡೆದು ಕೊಂಡಿದ್ದಾರೆಂದು ವರದಿ ತಿಳಿಸಿದೆ.





