ಯಾವ ಕಾರಣಕ್ಕೂ ಬಗರ್‌ಹುಕುಂ ಅರ್ಜಿಗಳನ್ನು ವಿಲೇಮಾಡದೆ ಕಾಲಹರಣ ಮಾಡುವಂತಿಲ್ಲ: ಸಚಿವ ಕಾಗೋಡು ತಿಮ್ಮಪ್ಪ
ಮಂಗಳೂರು: ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ

ಮಂಗಳೂರು, ಮಾ.9: ಕಂದಾಯ ಇಲಾಖೆಯಲ್ಲಿ ಸುಮಾರು 25 ವರ್ಷಗಳಿಂದ ಬಾಕಿಯುಳಿದಿರುವ ಕೃಷಿ ಭೂಮಿ ಅಕ್ರಮ ಸಕ್ರಮ (ಬಗರ್ ಹುಕುಂ) ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಸೂಚನೆ ನೀಡಿದರು.
ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕಂದಾಯ ಇಲಾಖೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವ ಕಾರಣಕ್ಕೂ ಬಗರ್‌ಹುಕುಂ ಅರ್ಜಿಗಳನ್ನು ವಿಲೇಮಾಡದೆ ಕಾಲಹರಣ ಮಾಡುವಂತಿಲ್ಲ. ಕಂದಾಯ ಇಲಾಖಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಈ ಬಗ್ಗೆ ಸುತ್ತೋಲೆ ಕಳುಹಿಸಿದ್ದೆ. ಆದರೂ ತಾವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಚಿವ ಕಾಗೋಡು ತಿಮ್ಮಪ್ಪ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದಕೊಂಡರಲ್ಲದೆ ಅರ್ಜಿ ವಿಲೇಗೆ ಸಂಬಂಧಿಸಿ ಎಲ್ಲ ತಹಶೀಲ್ದಾರರು ಕಂದಾಯ ನಿರೀಕ್ಷಕರಿಗೆ ಗುರಿ ನಿಗದಿಪಡಿಸಬೇಕು. ಸಚಿವರಿದ್ದ ಕ್ಷೇತ್ರದಲ್ಲಿ ಸಮಿತಿ ರಚಿಸಲು ಕ್ರಮ ಜರಗಿಸಬೇಕು ಎಂದರು.
ಈಗಾಗಲೇ ಸರಕಾರಿ ಜಮೀನುಗಳಲ್ಲಿ ವಾಸವಾಗಿರುವವರಿಗೆ 94ಸಿ ಮತ್ತು 94ಸಿಸಿಯಡಿ ಪಂಚಾಯತ್‌ನಿಂದಲೇ ಹಕ್ಕುಪತ್ರ ನೀಡುವಂತೆ ಸುತ್ತೋಲೆ ಕಳುಹಿಸಲಾಗುವುದು. ಹಕ್ಕುಪತ್ರಕ್ಕಾಗಿ ಸಾರ್ವಜನಿಕರನ್ನು ತಹಶೀಲ್ದಾರ್ ಕಚೇರಿಗೆ ಅಲೆಸುವುದು ಬೇಡ ಎಂದು ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚಿಸಿದರು.
94ಸಿ ಮತ್ತು 94ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡುವ ಕಾರ್ಯವನ್ನು 6 ತಿಂಗಳೊಳಗೆ ಮುಗಿಸಬೇಕು. ಗ್ರಾಮ ಲೆಕ್ಕಾಧಿಕಾರಿ ಮತ್ತು ಪಿಡಿಒ ಜಂಟಿಯಾಗಿ ಭೂ ನಕಾಶೆ ಇಟ್ಟುಕೊಂಡು ಪ್ರತಿ ಸರ್ವೇ ನಂಬ್ರದ ಜಾಗಕ್ಕೆ ಹೋಗಿ ಪರಿಶೀಲನೆ ಮಾಡಬೇಕು ಮತ್ತು ವಿವಿಧ ಕೈಗಾರಿಕೆ ಮತ್ತಿತರ ಕೆಲಸಗಳಿಗಾಗಿ ಭೂಸ್ವಾಧೀನ ಮಾಡಲಾದ ಜಮೀನು ಆ ಉದ್ದೇಶಕ್ಕೆ ಬಳಕೆ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಸರ್ವೇ ನಡೆಸಿ ವರದಿ ನೀಡಬೇಕು ಎಂದು ಸಚಿವ ಕಾಗೋಡು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಕುಮ್ಕಿ, ಕಾನಾಬಾಣೆ, ಹಾಡಿ ಇತ್ಯಾದಿ ಭೂಮಿಯನ್ನು ಕಂದಾಯ ಇಲಾಖೆಯ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಡಿ ತರಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಪ್ರಸ್ತುತ ಕುಮ್ಕಿ, ಕಾನಾಬಾಣೆ, ಹಾಡಿ, ಸುಂಕದ ಬೆಟ್ಟ ಈ ಎಲ್ಲ ಜಮೀನುಗಳು ಡೀಮ್ಡ್ ಫಾರೆಸ್ಟ್ ಅಡಿಯಲ್ಲಿದ್ದರೂ ಕಂದಾಯ ಕಾನೂನು 79/2 ರ ಪ್ರಕಾರ ಕಂದಾಯ ಭೂಮಿಯೇ ಆಗಿರುತ್ತದೆ. ಆದರೆ ಈ ಹಿಂದೆ ಇದನ್ನು ಡೀಮ್ಡ್ ಫಾರೆಸ್ಟ್‌ಗೆ ಸೇರಿಸಿದ್ದಾರೆ. ಇದನ್ನು ಮತ್ತೆ ಕಂದಾಯ ಇಲಾಖೆಯಡಿ ತರುವಲ್ಲಿ ಕಾನೂನು ತಿದ್ದುಪಡಿ ಮಾಡಬೇಕಿದೆ ಎಂದು ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಈ ಹಿಂದೆ ಡೀಮ್ಡ್ ಫಾರೆಸ್ಟ್ ಮಾಡುವಾಗ ಕೆರೆ, ರಸ್ತೆ ಸಹಿತ ಸಾರ್ವಜನಿಕ ಉಪಯೋಗದ ನಿರ್ಮಾಣಗಳನ್ನು ಇದರೊಳಗೆ ಸೇರಿಸಲಾಗಿತ್ತು. ಆ ಬಳಿಕ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಯಾ ವ್ಯಾಪ್ತಿಯ ರಸ್ತೆ, ಕೆರೆಗಳ ವಿವರಗಳನ್ನು ತರಿಸಿಕೊಳ್ಳಲಾಗಿದೆ. ಇವುಗಳನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈ ಬಿಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದರು.
ಏನಿದು ಬಗರ್‌ಹುಕುಂ?:
ಸರಕಾರಿ ಜಮೀನಿನಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಕೃಷಿಕರಿಗೆ ಸಾಗುವಳಿ ಚೀಟಿ ನೀಡಲು 1991ರಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ ಕಲಂ 94ರ ಪ್ರಕಾರ ರಚಿಸಲಾದ ಕಾಯ್ದೆ ಇದಾಗಿದೆ. ಅದರಂತೆ ಅಕ್ರಮ ಸಕ್ರಮ ಫಾರ್ಮ್ 50ರಲ್ಲಿ 1991ರ ಸೆ.19 ಮತ್ತು ಫಾರ್ಮ್ 53ರಲ್ಲಿ 1999ರ ಎ.30ರೊಳಗೆ ರೈತರು ಸಲ್ಲಿಸಬಹುದಾಗಿತ್ತು.
ಕಾಗೋಡು ತಿಮ್ಮಪ್ಪಸ್ಪೀಕರ್ ಆಗಿದ್ದಾಗಲೂ ಮತ್ತು ಕಂದಾಯ ಇಲಾಖೆಯ ಸಚಿವರಾದಾಗಲೂ ಬಗರ್ ಹುಕುಂ ಕೃಷಿಕರಿಗೆ ಸಾಗುವಳಿ ಚೀಟಿ ನೀಡುವುದು ಆದ್ಯತೆಯ ವಿಚಾರವೆಂದು ಹೇಳಿದ್ದರು. ಈ ನಿಟ್ಟಿನಲ್ಲಿ ಅವರು ಹಲವು ಬಾರಿ ಸುತ್ತೋಲೆ ಕಳುಹಿಸಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ.
ಈ ಮಧ್ಯೆ ನಕಲಿ ದಾಖಲೆಗಳ ಮೂಲಕ ಅಕ್ರಮ ಸಕ್ರಮ ಜಮೀನು ಸಾಗುವಳಿ ಚೀಟಿ ಪಡೆದುಕೊಂಡ ನಿದರ್ಶನಗಳು ಜಿಲ್ಲೆಯಲ್ಲಿ ಸಾಕಷ್ಟಿವೆ. ಕೆಲವರು ರಾಜಕೀಯ ಪ್ರಭಾವ ಬಳಸಿ ಚೀಟಿ ಮಾಡಿಕೊಂಡದ್ದೂ ಇದೆ. ಬಡಪಾಯಿಗಳ ಕಡತಗಳು ನಾಪತ್ತೆಯಾಗಿವೆ. ಅವುಗಳ ಹುಡುಕಾಟವೇ ಈಗ ಸಮಸ್ಯೆಯಾಗಿವೆ.







