ಪಿಯುಸಿ ಪರೀಕ್ಷೆ ಬರೆಯಬೇಕಾದವನು ಉತ್ತರ ಪತ್ರಿಕೆಯೊಂದಿಗೆ ಓಡಿ ಹೋದ !

ದಾವಣಗೆರೆ, ಮಾ.9: ಪಿಯುಸಿ ದ್ವಿತೀಯ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿ ಉತ್ತರ ಪತ್ರಿಕೆಯೊಂದಿಗೆ ಓಡಿ ಹೋಗಿರುವ ಘಟನೆ ಗುರುವಾರ ನಡೆದಿದೆ. ಅಲ್ಲದೇ ಮತ್ತೊಬ್ಬ ವಿದ್ಯಾರ್ಥಿ ಡಿಬಾರ್ ಆಗಿರುವ ಘಟನೆ ಜರಗಿದೆ.
ಹರಪನಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಇತಿಹಾಸ ಪರೀಕ್ಷೆಗೆ ಸಿಂಗ್ರಿಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಹೀಲ್ ಬಿ. ಹಾಜರಾಗಿದ್ದ. ಪರೀಕ್ಷೆ ಪ್ರಾರಂಭವಾದ ಅರ್ಧ ಗಂಟೆಯ ನಂತರ ಪರೀಕ್ಷಾ ಮೇಲ್ವಿಚಾರಕರಾದ ನಿಸರ್ಗ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಂಕರನಾಯ್ಕ ಅವರು ಮತ್ತೋರ್ವ ವಿದ್ಯಾರ್ಥಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡುತ್ತಿದ್ದಾಗ, ತನ್ನ ಉತ್ತರ ಪತ್ರಿಕೆಯನ್ನು ತೇಗೆದುಕೊಂಡು ಓಡಿ ಹೋಗಿದ್ದಾನೆ.
ಈ ಬಗ್ಗೆ ಹರಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿಜಯಾನಂದ್ ತಿಳಿಸಿದ್ದಾರೆ.
ದಾವಣಗೆರೆಯ ನೂತನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಇತಿಹಾಸ ಪರೀಕ್ಷೆಯಲ್ಲಿ ಮೋತಿ ವೀರಪ್ಪ ಕಾಲೇಜಿನ ವಿದ್ಯಾರ್ಥಿಯೋರ್ವ ನಕಲು ಮಾಡುವಲ್ಲಿ ಸಿಕ್ಕಿಹಾಕಿಕೊಂಡು ಡಿಬಾರ್ ಆಗಿದ್ದಾನೆ.
961 ವಿದ್ಯಾರ್ಥಿಗಳು ಗೈರು :
ಮೊದಲ ದಿನವಾದ ಗುರುವಾರ ಜೀವಶಾಸ್ತ್ರ ಹಾಗೂ ಇತಿಹಾಸ ವಿಷಯ ಪರೀಕ್ಷೆಯಲ್ಲಿ ಒಟ್ಟು 961 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜೀವಶಾಸ್ತ್ರ ಪರೀಕ್ಷೆಯ 7,384 ವಿದ್ಯಾರ್ಥಿಗಳಲ್ಲಿ 164 ವಿದ್ಯಾರ್ಥಿಗಳು ಗೈರಾಗಿ 7,220 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೆ, ಇತಿಹಾಸ ಪರೀಕ್ಷೆ ತೆಗೆದುಕೊಂಡ 9,987 ವಿದ್ಯಾರ್ಥಿಗಳಲ್ಲಿ, 797 ವಿದ್ಯಾರ್ಥಿಗಳು ಗೈರಾಗಿ, 9,190 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ನಕಲು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.







