ಬೆಳ್ತಂಗಡಿ: ನಂಡೆ ಪೆಂಙಳ್ ಅಭಿಯಾನದಡಿ ಮನೆ ಭೇಟಿಗೆ ಚಾಲನೆ
.jpg)
ಬೆಳ್ತಂಗಡಿ, ಮಾ.9: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅನೇಕ ಸಹಭಾಗಿ ಸಂಘಟನೆಗಳ ಸಹಕಾರದಲ್ಲಿ ಹಾಕಿಕೊಂಡ ಅಭಿಯಾನವೇ "ನಂಡೆ ಪೆಂಙಳ್". ಪ್ರಾಯ ಮೂವತ್ತು ದಾಟಿದ ಒಂದು ಸಾವಿರ ಹೆಣ್ಮಕ್ಕಳ ಮದುವೆ ಯೋಜನೆ. ಇದೇ ಉದ್ದೇಶಕ್ಕಾಗಿ ಜಿಲ್ಲೆಯ ಅನೇಕ ಸಾಮುದಾಯಿಕ ಕಾಳಜಿಯುಳ್ಳ ನಾಯಕರನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ಇಷ್ಟರಲ್ಲೇ ರಚಿಸಲಾಗಿದೆ.
ಸದರಿ ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರಾಯ ಮೂವತ್ತು ಮೀರಿದ ಮದುವೆಯಾಗದ ಹೆಣ್ಮಕ್ಕಳ ಮನೆಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಗುರುವಾರ ಬೆಳ್ತಂಗಡಿ ತಾಲೂಕಿನಲ್ಲಿ ಚಾಲನೆ ನೀಡಲಾಯಿತು.
ಬೆಳ್ತಂಗಡಿ ತಾಲೂಕಿನ ಮನೆಯೊಂದರಲ್ಲಿ ಮದುವೆಯಾಗದಿರುವ ಐದು ಹೆಣ್ಮಕ್ಕಳಿದ್ದು ಅವರ ಮದುವೆಗೆ ಅಗತ್ಯ ಸಹಾಯದ ಭರವಸೆಯನ್ನು ನೀಡಿ ಕೂಡಲೇ ಮದುವೆಗೆ ಕ್ರಮಕೈಗೊಳ್ಳುವಂತೆ ತಿಳಿಸಲಾಯಿತು.
ನಂತರ ತಂಡವು ಈಗಾಗಲೇ ಮದುವೆಗೆ ದಿನಾಂಕ ನಿಗದಿಯಾದ ಕುಟುಂಬವೊಂದಕ್ಕೆ ಭೇಟಿ ನೀಡಿ ಮನೆಯ ಪರಿಸ್ಥಿತಿಯನ್ನು ಅವಲೋಕಿಸಲಾಯಿತು. ಸದರಿ ಹೆಣ್ಮಗಳ ತಾಯಿಗೆ ಸಹಾಯದ ಭರವಸೆಯನ್ನು ನೀಡಿದಾಗ ಅವರ ಮುಖದಲ್ಲಿ ಸಂತೋಷದ ನಗೆ ಬೀರಿ ಇದಕ್ಕಾಗಿ ಸಹಾಯ ಮಾಡುವ ಎಲ್ಲರಿಗಾಗಿ ಪ್ರಾರ್ಥಿಸಿದರು.
ತಂಡದಲ್ಲಿ ಪರಿಶೀಲನೆ ಮತ್ತು ಇತ್ಯರ್ಥ ತಂಡದ ಮುಖ್ಯಸ್ಥ ಸುಲೈಮಾನ್ ಶೇಖ್ ಬೆಳುವಾಯಿ, ಸದಸ್ಯ ಮುಹಮ್ಮದ್ ಬೆಳ್ಳಚ್ಚಾರ್, ಸಮೀಕ್ಷೆ ತಂಡದ ಮುಖ್ಯಸ್ಥ ಡಿ ಅಬ್ದುಲ್ ಹಮೀದ್ ಕಣ್ಣೂರು, ಸಂಚಾಲಕ ಮುಹಮ್ಮದ್ ಯು.ಬಿ ಹಾಗೂ ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್ ಭಾಗವಹಿಸಿದ್ದರು.
ದ.ಕ ಜಿಲ್ಲೆಯಲ್ಲಿ ಪ್ರಾಯ ಮೂವತ್ತು ಮೀರಿ ಮದುವೆಯಾಗದಿರುವ ಹೆಣ್ಮಕ್ಕಳ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದು, ಜಿಲ್ಲೆಯ ಎಲ್ಲಾ ಮಸೀದಿ ಆಡಳಿತ ಸಮಿತಿಯವರು ತಮ್ಮ ಜಮಾಅತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಮಾಹಿತಿಯನ್ನು ನೀಡುವುದು. ಮಸೀದಿಗಳ ಖತೀಬರು ಈ ಅಭಿಯಾನದ ಬಗ್ಗೆ ಎಲ್ಲಾ ಮಸೀದಿಗಳಲ್ಲಿ ಪ್ರಚಾರ ಪಡಿಸುವುದು ಹಾಗೂ ತಮ್ಮ ತಮ್ಮ ಜಮಾಅತ್ ವ್ಯಾಪ್ತಿಯಲ್ಲೇ ಈ ಹೆಣ್ಮಕ್ಕಳ ಮದುವೆಗೆ ಸಂಪೂರ್ಣ ವ್ಯವಸ್ಥೆ ಮಾಡುವುದು ಮತ್ತು ಅಗತ್ಯ ಆರ್ಥಿಕ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ವಿನಂತಿಸಿದ್ದಾರೆ.







