1967ರಿಂದ 15,000 ಫೆಲೆಸ್ತೀನ್ ಮಹಿಳೆಯರು ಇಸ್ರೇಲ್ ಬಂಧನದಲ್ಲಿ

ಜೆರುಸಲೇಂ, ಮಾ. 9: ಇಸ್ರೇಲ್ 1967ರ ಬಳಿಕ ಸುಮಾರು 15,000 ಫೆಲೆಸ್ತೀನ್ ಮಹಿಳೆಯರನ್ನು ಬಂಧಿಸಿದೆ ಎಂದು ಫೆಲೆಸ್ತೀನ್‌ನ ಸಂಸ್ಥೆಯೊಂದು ತನ್ನ ವರದಿಯೊಂದರಲ್ಲಿ ಗುರುವಾರ ಹೇಳಿದೆ.
ಈಗ ಇಸ್ರೇಲ್‌ನ ಬಂಧನದಲ್ಲಿ 56 ಮಹಿಳೆಯರು ಇದ್ದು, ಅವರ ಪೈಕಿ 16 ಮಂದಿ ಅಪ್ತಾಪ್ತ ವಯಸ್ಕರು, 18 ಮಂದಿ ವಿವಾಹಿತರು ಹಾಗೂ 11 ರೋಗಿಗಳಿದ್ದಾರೆ ಎಂದು ಬಂಧಿತರು ಮತ್ತು ಮಾಜಿ ಬಂಧಿತರ ವ್ಯವಹಾರಗಳ ಆಯೋಗ ತಿಳಿಸಿದೆ.ಮಹಿಳೆಯರನ್ನು ಶರೋನ್ ಮತ್ತು ಡಾಮನ್ ಜೈಲುಗಳಲ್ಲಿ ಇಡಲಾಗಿದೆ.
ಉಪವಾಸ ಸತ್ಯಾಗ್ರಹ ನಡೆಸಿ ಈಗ ಜೈಲಿನಲ್ಲಿರುವ ಸಮೀರ್ ಇಸಾವಿಯ ಸಹೋದರಿ ಶಿರೀನ್ ಅಲ್-ಇಸಾವಿ ತಲೆಸುತ್ತುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಂಧನದ ಮೊದಲು ಅವರು ಒಂದು ಕಲಿಕಾ ಕೋರ್ಸ್ ಮಾಡುತ್ತಿದ್ದರು. ಅದನ್ನು ಮುಂದುವರಿಸುವುದಕ್ಕಾಗಿ ಓದಲು ಪುಸ್ತಕಗಳನ್ನು ಜೈಲಿನೊಳಗೆ ಒಯ್ಯುವುದನ್ನು ಸರಕಾರ ನಿಷೇಧಿಸಿದೆ ಎಂದು ವರದಿ ತಿಳಿಸಿದೆ.
ಜನವರಿ ವೇಳೆಗೆ ಇಸ್ರೇಲ್‌ನ ಜೈಲುಗಳಲ್ಲಿ ಸುಮಾರು 6,500 ಫೆಲೆಸ್ತೀನೀಯರು ಇದ್ದರು ಎಂದು ಕೈದಿಗಳ ಹಕ್ಕುಗಳ ಗುಂಪು ‘ಅಡ್ಡಾಮೀರ್’ ಹೇಳಿದೆ. ಅವರ ಪೈಕಿ 353 ಮಂದಿ ಮಹಿಳೆಯರು ಮತ್ತು ಮಕ್ಕಳು ಆಗಿದ್ದರು.





