ಚುನಾವಣಾ ಸಂದರ್ಭಕ್ಕೆ ಸೂಕ್ತವಾದ ಹೊಸ ಕಾಯ್ದೆ ಅಗತ್ಯ : ಝೈದಿ

ಹೊಸದಿಲ್ಲಿ, ಮಾ.9: ಚುನಾವಣಾ ಸಂದರ್ಭದಲ್ಲಿ ಸಕ್ರಿಯವಾಗುವ ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸಲು ನೂತನ ಕಾಯ್ದೆಯೊಂದರ ಅಗತ್ಯವಿದೆ ಎಂದು ಮುಖ್ಯ ಚುನಾವಣಾಧಿಕಾರಿ ನಸೀಮ್ ಝೈದಿ ಹೇಳಿದ್ದಾರೆ.
ಮಹತ್ವದ ಉತ್ತರಪ್ರದೇಶವೂ ಸೇರಿದಂತೆ ಐದು ರಾಜ್ಯಗಳಲ್ಲಿ ಮತದಾನ ಪೂರ್ಣಗೊಂಡ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಹಲವು ಮಂದಿ ಮಾದರಿ ನೀತಿ ಸಂಹಿತೆಯ ಷರತ್ತುಗಳಿಂದ ಪಾರಾಗಲು ವಿವಿಧ ಕಸರತ್ತು ಮಾಡಿದ್ದಾರೆ ಎಂದರು.
ಪ್ರಸಕ್ತ ಚುನಾವಣಾ ಆಯೋಗ ಸಾಕಷ್ಟು ಸನ್ನದ್ಧವಾಗಿಲ್ಲ ಎಂದು ಹೇಳುವಂತಿಲ್ಲ. ನ್ಯಾಯಾಲಯದ ತೀರ್ಪು ಮತ್ತು ನಿರ್ದೇಶನದ ಆಧಾರದಲ್ಲಿ ಆಯೋಗವು ಒಂದು ಚೌಕಟ್ಟನ್ನು ರೂಪಿಸಿಕೊಂಡಿದೆ. ಇದನ್ನು ಮಾರ್ಗಸೂಚಿಯಾಗಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದವರು ಹೇಳಿದರು.
ಚುನಾವಣಾ ನಿರ್ವಹಣೆ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಸಕ್ರಿಯವಾಗಿ ರೂಪುಗೊಳ್ಳುವ ಕಾರಣ ಭವಿಷ್ಯದಲ್ಲಿ ನಿರ್ದಿಷ್ಟ ಪರಿಸ್ಥಿತಿಯನ್ನು ನಿಭಾಯಿಸಲು ಕಾಯ್ದೆಯೊಂದರ ಅಗತ್ಯವಿದೆ ಎಂದರು. ಮಾದರಿ ನೀತಿ ಸಂಹಿತೆ ಎಂಬುದು ಅವಾಸ್ತವಿಕ ಸಾಧನವಾಗಿದೆ ಎಂದು ಕೆಲವರು ಟೀಕಿಸಬಹುದು. ಆದರೆ ಮಾದರಿ ನೀತಿ ಸಂಹಿತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಾಧ್ಯವಿದೆ ಎಂದ ಅವರು, ಚುನಾವಣಾ ಆಯೋಗವು ಪ್ರಭಾವೀ ರಾಜಕಾರಣಿಗಳ ಬಗ್ಗೆ ಮೃದು ಧೋರಣೆ ಅನುಸರಿಸುತ್ತದೆ ಎಂಬ ಟೀಕೆಯನ್ನು ತಳ್ಳಿ ಹಾಕಿದರು.
ಆಯೋಗವು ಪ್ರಕರಣವೊಂದರ ವಿಷಯ ಮತ್ತು ಸಂದರ್ಭವನ್ನು ಮೊದಲು ಪರಿಶೀಲಿಸುತ್ತದೆ. ಆ ಬಳಿಕ ತನ್ನ ವಿವೇಚನೆಯಂತೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಒಂದೇ ರೀತಿಯ ಪ್ರಕರಣಗಳನ್ನು ಸಮಾನವಾಗಿ ನಿಭಾಯಿಸಲು ಪ್ರಯತ್ನಿಸಲಾಗುತ್ತದೆ ಎಂದವರು ತಿಳಿಸಿದರು.