ಮಾನವೀಯತೆಯ ವರದಿಗಳಿಗೆ ಒಲವು ಅಗತ್ಯ: ವಸಂತಿ ಹರಿಪ್ರಕಾಶ್

ಉಳ್ಳಾಲ, ಮಾ.9: ಪತ್ರಿಕಾ ರಂಗದಲ್ಲಿ ಇಂದು ಯುವ ಸಮುದಾಯ ಹೆಚ್ಚಾಗಿಸಿ ತೊಡಗಿಸಿಕೊಂಡಿದ್ದಾರೆ. ಸಮಾಜಮುಖಿ, ಮಾನವೀಯತೆಯನ್ನು ಆಧರಿಸಿದ ವರದಿಗಳಿಗೆ ಹೆಚ್ಚಿನ ಒಲವು ತೋರಿಸಬೇಕಾದ ಅಗತ್ಯತೆ ಇದೆ ಎಂದು ಖ್ಯಾತ ಪತ್ರಕರ್ತೆ ಹಾಗೂ ಜನಪ್ರಿಯ ನಿರೂಪಕಿ ವಸಂತಿ ಹರಿಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ದೇರಳಕಟ್ಟೆ ಇದರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವತಿಯಿಂದ ಪನೀರ್ ಕ್ಯಾಂಪಸ್ ನಲ್ಲಿ ಮಾಚ್ 9ರಿಂದ 11ರ ವರೆಗೆ ನಡೆಯಲಿರುವ ಬೀಕನ್ಸ್ 2ಕೆ17 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರದಲ್ಲಿ 70 ಸಾವಿರ ಪತ್ರಿಕೆಗಳು ,1600 ಉಪಗ್ರಹ ಆಧಾರಿತ ಚಾನೆಲ್ ಗಳು, 400 ಸುದ್ದಿ ಚಾನೆಲ್ ಗಳು ಹಾಗೂ ಅಸಂಖ್ಯಾತ ರೆಡಿಯೋ ವಾಹಿನಿಗಳು ಕಾರ್ಯಚರಿಸುತ್ತಿದ್ದು ಸುದ್ದಿ ಮಾಧ್ಯಮಕ್ಕೊಂದು ದೊಡ್ಡ ಮಾರುಕಟ್ಟೆಯನ್ನು ಭಾರತ ಒದಗಿಸಿಕೊಟ್ಟಿದೆ. ಮಾಧ್ಯಮಗಳು ಈ ಹಿಂದಿಗಿಂತಲೂ ಪ್ರಜಾಪ್ರಭುತ್ವಿಕರಣಗೊಂಡಿದೆ. ಈ ನಡುವೆ ಖಾಸಗಿ ಬ್ಲಾಗ್‌ಗಳು ಹಾಗೂ ಸಾಮಾಜಿಕ ಜಾಲ ತಾಣಗಳು ಮಾಧ್ಯಮಗಳಂತೆ ಕಾರ್ಯಚರಿಸುತ್ತಿದ್ದು ಟ್ವಿಟ್ ಗಳು ವೈರಲ್ ಗಳಂತೆ ಕ್ಷಣರ್ಧದಲ್ಲಿ ಹರಡುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ದಿನದಿಂದ ದಿನಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ಗಳಿಸುತ್ತಿದೆ ಎಂದರು.
ಕೇವಲ ನೋಟ್ ಪ್ಯಾಡ್ ಹಿಡಿದುಕೊಳ್ಳುವುದು ಪತ್ರಕರ್ತರ ಕೆಲಸವಲ್ಲ. ಹಿಂದಿನ ಪತ್ರಕರ್ತರು ಕೇವಲ ನೋಟ್‌ಪ್ಯಾಡ್ ಹಿಡಿದುಕೊಂಡವರಲ್ಲ. ಬದಲಿಗೆ ಪೋಟೋಗ್ರಾಫರಾಗಿ, ವೀಡಿಯೋಗ್ರಾಫರ್ ವರದಿಗಾರರಾಗಿ ಕೆಲಸ ಮಾಡುವ ಮೂಲಕ ಎಲ್ಲ ವಿಚಾರದಲ್ಲೂ ಸೈ ಎನಿಸಿಕೊಂಡಿದ್ದಾರೆ. ವರದಿಗಾರರು ತಮ್ಮ ಜೀವನ ಯಾವ ರೀತಿ ಸಾಗುತ್ತದೋ ಅದೇ ರೀತಿಯಲ್ಲಿ ಮುಂದುವರೆಯಿರಿ. ಆದರೆ ಎಲ್ಲವನ್ನು ವರದಿಯನ್ನಾಗಿರಿಸಿ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸಲು ನೂತನ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಿ ಎಂದ ಅವರು ಪ್ರಸುತ್ತ ಮಾಧ್ಯಮದಲ್ಲಿ ಕೆಲವೊಂದು ವಿಷಯಗಳು ಅಡ್ಡ ಪರಿಣಾಮದಿಂದಾಗಿ ಬಹುತೇಕ ಪ್ರಾಮಾಣಿಕ ಪತ್ರಕರ್ತರು ಇಕ್ಕಟ್ಟಿಗೆ ಸಿಲುಕುವುದರ ಜೊತೆಗೆ ಪ್ರಸುತ್ತ ವರ್ಷದಲ್ಲಿ 48 ಕಾರ್ಯನಿರತ ಪತ್ರಕರ್ತರು ಕೊಲೆಗೀಡಾಗಿದ್ದಾರೆ. ಆದರೂ ಮಾಧ್ಯಮದ ಬಗ್ಗೆ ಒಲವು ತೋರಿಸಿ ಯುವ ಪೀಳಿಗೆ ಹೆಚ್ಚಾಗಿ ಪ್ರತಿಕಾ ರಂಗದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಶಾಲ್ ಹೆಗ್ಡೆ ವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕಿ ಅನಿಶಾ ನಿಶಾಂತ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ರವಿರಾಜ್ ಉಪಸ್ಥಿತರಿದ್ದರು. ಕೆವಿನ್ ಕಾರ್ಯಕ್ರಮ ನಿರೂಪಿಸಿದರು. ರೋಹನ್ ವಂದಿಸಿದರು.







