ರಾಷ್ಟ್ರಪತಿ ಆಡಳಿತಕ್ಕಿಂತ ಬಿಎಸ್ಪಿ ಜೊತೆ ಮೈತ್ರಿ ಮೇಲು: ಅಖಿಲೇಶ್

ಹೊಸದಿಲ್ಲಿ, ಮಾ.9: ಸಮಾಜವಾದಿ ಪಕ್ಷವು ಉತ್ತರಪ್ರದೇಶದಲ್ಲಿ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಒಂದು ವೇಳೆ ಯಾವುದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿ ಉಂಟಾದರೆ ಆಗ ಮಾಯಾವತಿಯವರ ಬಿಎಸ್ಪಿ ಪಕ್ಷದ ಜೊತೆ ಕೈಜೋಡಿಸಲೂ ಸಿದ್ಧ ಎಂದು ಹೇಳಿದ್ದಾರೆ.
ನಮ್ಮ ನಿಲುವು ಸ್ಪಷ್ಟ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರಪತಿ ಆಡಳಿತ ಜಾರಿಯಾಗಬಾರದು. ಒಂದು ವೇಳೆ ಅತಂತ್ರ ಸ್ಥಿತಿ ಉಂಟಾದರೆ ನಾವು ಬಿಎಸ್ಪಿ ಜೊತೆ ಕೈಜೋಡಿಸಲೂ ಸಿದ್ದ ಎಂದು ಬಿಬಿಸಿ ಜೊತೆ ಮಾತಾಡುತ್ತಿದ್ದ ಅವರು ಹೇಳಿದರು. ಆದರೆ ಬಿಬಿಸಿ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿರುವ ಧ್ವನಿಯ ಕ್ಲಿಪ್‌ನಲ್ಲಿ, ಅಖಿಲೇಶ್ ಅವರ ಧ್ವನಿ ಸ್ಪಷ್ಟವಾಗಿ ಕೇಳಿ ಬರುತ್ತಿಲ್ಲ.
ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವಿನ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಹೇಳಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯನ್ನು ತಿಳಿಸಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವುದಾಗಿ ತಿಳಿಸಿವೆ.