ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸಿಎಂ ಆದೇಶ
ವಿದ್ಯಾರ್ಥಿಗಳ ಸಾವು ಪ್ರಕರಣ

ಬೆಂಗಳೂರು, ಮಾ. 9: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ವಿದ್ಯಾ ವಾರಿದಿ ಅಂತಾರಾಷ್ಟ್ರೀಯ ಶಾಲೆಯ ಹಾಸ್ಟೆಲ್‌ನಲ್ಲಿ ಬುಧವಾರ ರಾತ್ರಿ ವಿಷಾಹಾರ ಸೇವಿಸಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಈ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ.
ಬೆಳದ ಮಕ್ಕಳು ತಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದರೆ ತಂದೆ-ತಾಯಿಗೆ ಆಗುವ ಆಘಾತ ಹಾಗೂ ನೋವು ಏನೆಂಬುದು ನನಗೆ ಗೊತ್ತು. ಇಂತಹ ಕರಾಳ ಘಟನೆಗಳು ಎಲ್ಲೂ ಯಾರ ಜೀವನದಲ್ಲೂ ನಡೆಯಬಾರದು. ಮಕ್ಕಳನ್ನು ಕಳೆದುಕೊಂಡ ತಂದೆ- ತಾಯಿಯರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಲಭಿಸಲಿ. ಮಕ್ಕಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಪಾಲಕ-ಪೋಷಕರಿಗೆ ಭಗವಂತನು ಕರುಣಿಸಲಿ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Next Story





