5 ಮಸೀದಿಗಳಿಗೆ ಬೆದರಿಕೆ ಕರೆಗಳು

ವಾಶಿಂಗ್ಟನ್, ಮಾ. 9: ಅಮೆರಿಕದ ಐದು ಮಸೀದಿಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದು, ಒಂದು ಸಂದೇಶವು ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದರೆ, ಇನ್ನೊಂದು ‘‘ನಿಮಗೆ ಹಾಗೂ ನಿಮ್ಮಂಥವರಿಗೆ ಸಾವು ಕಾಯುತ್ತಿದೆ’’ ಎಂದು ಹೇಳಿದೆ.
ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಕೆಂಟಕಿ ರಾಜ್ಯದ ಲೆಕ್ಸಿಂಗ್ಟನ್‌ನ ಮಸೀದಿಯೊಂದು ತನ್ನ ಭದ್ರತೆಯನ್ನು ಹೆಚ್ಚಿಸಿದೆ.
ಇಂಗ್ಲೆಂಡ್‌ನ ಶೆಫೀಲ್ಡ್‌ನಿಂದ ಶನಿವಾರ ಬಂದ ಪತ್ರವೊಂದರಲ್ಲಿ ಲೆಕ್ಸಿಂಗ್ಟನ್‌ನ ಬಿಲಾಲ್ ಮಸೀದಿಯನ್ನು ಸ್ಫೋಟಿಸುವ ಬೆದರಿಕೆಯನ್ನು ಹಾಕಲಾಗಿದೆ ಎಂದು ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್) ಫೇಸ್‌ಬುಕ್ ಸಂದೇಶವೊಂದರಲ್ಲಿ ಹೇಳಿದೆ.
ಜಾರ್ಜಿಯ ರಾಜ್ಯದ ನಾಲ್ಕು ಮಸೀದಿಗಳಿಗೆ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ, ಭದ್ರತೆಯನ್ನು ಹೆಚ್ಚಿಸುವಂತೆ ರಾಜ್ಯದ ಮಸೀದಿಗಳ ಆಡಳಿತ ಮಂಡಳಿಗಳಿಗೆ ಸಿಎಐಆರ್‌ನ ಜಾರ್ಜಿಯ ಘಟಕವು ಕರೆ ನೀಡಿದೆ.
ಒಂದು ಮಸೀದಿಯು ಸ್ವಯಂಘೋಷಿತ ‘ಮುಸ್ಲಿಮ್ ಹಂತಕ’ನಿಂದ ‘‘ನಿಮಗೆ ಮತ್ತು ನಿಮ್ಮಂಥವರಿಗೆ ಸಾವು ಕಾದಿದೆ’’ ಎಂಬ ಎಚ್ಚರಿಕೆಯನ್ನು ಒಳಗೊಂಡ ಸಂದೇಶವೊಂದನ್ನು ಸ್ವೀಕರಿಸಿದೆ ಎಂದು ಸಿಎಐಆರ್‌ನ ಕಾರ್ಯಕಾರಿ ನಿರ್ದೇಶಕ ಎಡ್ವರ್ಡ್ ಅಹ್ಮದ್ ಮಿಚೆಲ್ ಹೇಳಿರುವುದಾಗಿ ‘ದಿ ಅಟ್ಲಾಂಟ ಜರ್ನಲ್-ಕಾನ್‌ಸ್ಟಿಟ್ಯೂಶನ್’ ವರದಿ ಮಾಡಿದೆ.







