ಮಂಗಳೂರು: ಕೊಲೆ ಆರೋಪಿಯ ಬಂಧನ

ಮಂಗಳೂರು, ಮಾ. 9: ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಪ್ಪಿನಮೊಗರು ತಾರದೋಲ್ಯಗುಡ್ಡೆ ನಿವಾಸಿಗಳಾದ ವರಾಮ ರೈ(45) ಮತ್ತು ಸುಶಾನ್ ರೈ ಪಾಪು (29) ಬಂಧಿತರು.
ಮಾ.7ರಂದು ಸಂಜೆ 6 ಗಂಟೆಗೆ ಮಂಗಳೂರು ನಗರದ ಜೆಪ್ಪಿನಮೊಗರು ಕಾಡಬರೆಗದ್ದೆ ಎಂಬಲ್ಲಿನ ನಿವಾಸಿ ನೌಫಲ್ ಇಬ್ರಾಹೀಂ ಎಂಬವರಿಗೆ ಶಿವರಾಮ ರೈ ಮತ್ತು ಪಾಪು ಸುಶಾನ್ ರೈ ಎಂಬವರು ಕ್ಷುಲಕ ಕಾರಣಕ್ಕೆ ಚೂರಿಯಿಂದ ಇರಿದು, ವಿಕೆಟ್ನಿಂದ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಇಂದು ನಗರದ ಪಂಪ್‌ವೆಲ್ ಬಳಿಯಿಂದ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಮುಂದಿನ ಕ್ರಮಕ್ಕಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಆರೋಪಿಗಳ ಪೈಕಿ ಶಿವರಾಮ ರೈ ಎಂಬಾತ 20 ವರ್ಷಗಳ ಹಿಂದೆ ಕೊಲೆ, ಕೊಲೆ ಯತ್ನ, ಬೆದರಿಕೆ ಹಾಗೂ ಇತರ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡಾ ತೆರೆಯಲಾಗಿತ್ತು.
ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.







