ಮಾ.11ರಂದು ಮಾರ್ಗರೆಟ್ ಆಳ್ವಾರ 'ಕರೇಜ್ ಆ್ಯಂಡ್ ಕಮಿಟ್‌ಮೆಂಟ್' ಆತ್ಮಕತೆ ಬಿಡುಗಡೆ

ಮಂಗಳೂರು, ಮಾ.9: ಕೆಥೊಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಹಾಗೂ ಆಗ್ನೆಶಿಯನ್ ಅಲ್ಯುಮ್ನಿ ಅಸೋಸಿಯೇಶನ್‌ಗಳ ಆಶ್ರಯದಲ್ಲಿ ಮಾ.11ರಂದು ಸಂಜೆ 5:30ಕ್ಕೆ ನಗರದ ಸಂತ ಆಗ್ನೆಸ್ ಕಾಲೇಜಿನ ಅವಿಲಾ ಸಭಾಂಗಣದಲ್ಲಿ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾರ ಱಕರೇಜ್ ಆ್ಯಂಡ್ ಕಮಿಟ್‌ಮೆಂಟ್‌ೞಆತ್ಮಕತೆ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕೆಥೊಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾದ ಅಧ್ಯಕ್ಷ ರಿಚರ್ಡ್ ಸಿ. ರೊಡ್ರಿಗಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂಜಯ್‌ಗಾಂಧಿ ಹಾಗೂ ಮಾರ್ಗರೆಟ್ ನಡುವೆ ಉಂಟಾದ ಬಿರುಕಿನಿಂದ ಕಾಂಗ್ರೆಸ್‌ನಿಂದ 1979ರಲ್ಲಿ ಆಳ್ವಾ ಉಚ್ಛಾಟನೆಗೊಂಡರು. ರಾಜೀವ್‌ಗಾಂಧಿಯ ಕೊನೆಯ ಪ್ರಚಾರ ಯಾತ್ರೆಯ ರಚನೆಯಲ್ಲಿ ಮಾರ್ಗರೆಟ್ ಪಾತ್ರ, ಜೈನ್ ಹವಾಲಾ ಹಗರಣದ ಸಿಬಿಐ ತನಿಖೆಯ ಉಸ್ತುವಾರಿ ಹೊಣೆಯನ್ನು ನಿರ್ವಹಿಸಿರುವುದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ಪ್ರಭಾವಿಗಳ ಬದುಕಿನ ಮೇಲೆ ಅಪೂರ್ವವಾದ ಒಳನೋಟಗಳನ್ನು ತಮ್ಮ 'ಕರೇಜ್ ಆ್ಯಂಡ್ ಕಮಿಟ್‌ಮೆಂಟ್' ಆತ್ಮಕತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಧಾನಿಗಳಾದ ಇಂದಿರಾಗಾಂಧಿ, ಪಿ.ವಿ. ನರಸಿಂಹರಾವ್, ಮನಮೋಹನ್ ಸಿಂಗ್‌ರ ಅವಧಿಯಲ್ಲಿ ರಾಜಕೀಯದಲ್ಲಿ ಕಾರ್ಯಪ್ರವೃತ್ತರಾಗಿದ್ದನ್ನು ಗ್ರಂಥದಲ್ಲಿ ದಾಖಲಿಸಿದ್ದಾರೆ. ಮಂಗಳೂರು, ಬೆಂಗಳೂರು, ಹೊಸದೆಹಲಿ ಹಾಗೂ ಪ್ರಪಂಚದಾದ್ಯಂತ ಹರಡಿರುವ ಕುಟುಂಬಸ್ಥರು, ಹಿತಚಿಂತಕರು ಹಾಗೂ ರಾಜಕೀಯ ವಿರೋಧಿಗಳ ಮೇಲೆ ಬೆಳಕು ಚೆಲ್ಲುವ, ರಾಜಕಾರಣ ಹಾಗೂ ಧೋರಣೆಗಳು, ಬದಲಾವಣೆಗಳು ಹಾಗೂ ಕುತಂತ್ರಗಳನ್ನು ವಿವರಿಸುವ 'ಕರೇಜ್ ಆ್ಯಂಡ್ ಕಮಿಟ್‌ಮೆಂಟ್' ನ್ನು ಗ್ರಂಥದಲ್ಲಿ ವಿವರಿಸಿದ್ದಾರೆ ಎಂದು ಹೇಳಿದರು.
ಈ ಆತ್ಮಕತೆಯನ್ನು ಮಾರ್ಗರೆಟ್ ಆಳ್ವಾ ಬಿಡುಗಡೆ ಮಾಡಲಿದ್ದಾರೆ. ಬಳಿಕ ಪುಸ್ತಕದ ಕುರಿತು ವಿಚಾರ, ವಿನಿಮಯ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಥೊಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾದ ಮಾಜಿ ಅಧ್ಯಕ್ಷೆ ಡಾ. ಡೆರಿಕ್ ಲೋಬೊ, ಉಪಾಧ್ಯಕ್ಷೆ ನಯನಾ ಫೆರ್ನಾಂಡಿಸ್, ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ. ಜೆಸ್ವಿನಾ ಎ.ಸಿ. ಉಪಸ್ಥಿತರಿದ್ದರು.







