ಮಹಿಳಾ ಸ್ವಾತಂತ್ರ್ಯ ಸ್ವೇಚ್ಛೆಯಾಗದಿರಲಿ: ರುಚಿಕಾ

ಮೂಡುಬಿದಿರೆ, ಮಾ.9: ಮಹಿಳೆಯರು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಅವರ ಚಿಂತನೆಗಳಲ್ಲೇ ಪರಿಹಾರವಿದೆ. ನಾವು ನೋಡುವ ದೃಷ್ಟಿಕೋನದ ಮೇಲೆ ನಮ್ಮ ಸಮಸ್ಯೆಗಳ ಮೂಲ ಅಡಗಿದೆ. ಟೀವಿ, ಸೀರಿಯಲ್‌ಗಳ ಭರಾಟೆಯಿಂದ ಮಹಿಳೆಯರ ಚಿಂತನೆಯ ಹರಿವು ಬದಲಾಗಿದೆ. ಮಹಿಳಾ ಸ್ವಾತಂತ್ರ್ಯ ಎಂಬುದು ಸ್ವೇಚ್ಛೆಯಾಗಬಾರದುಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ರುಚಿಕಾ ಅಭಿಪ್ರಾಯಪಟ್ಟರು.
ಅವರು ಬುಧವಾರ ಮೂಡುಬಿದಿರೆಯ ಎಮ್‌ಸಿಎಸ್ ಬ್ಯಾಂಕ್‌ನ ಸಭಾಂಗಣದಲ್ಲಿ ರೋಟರ್ ಕ್ಲಬ್ ಆಫ್ ಟೆಂಪಲ್ ಟೌನ್‌ನ ಮಹಿಳಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಳೆಯ, ಮಧ್ಯಂತರ ಹಾಗೂ ಆಧುನಿಕ ಇತಿಹಾಸದಲ್ಲಿಯೂ ಮಹಿಳಾ ಸ್ವಾತಂತ್ರ್ಯ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಋಗ್ವೇದದಲ್ಲೂ ಮಹಿಳಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಅಂಶಗಳಿವೆ. ಅದಾಗಿ ರಾಜರ ಕಾಲದಲ್ಲಿಯೂ ಮಹಿಳೆಯರು ಅಧಿಕಾರ ನಡೆಸಿ ಯಶಸ್ವಿಯಾಗಿದ್ದರು. ಆಧುನಿಕ ಕಾಲದಲ್ಲಿಯೂ ಇರೋಮ್ ಶರ್ಮಾ, ಅರುಣಿಮಾ ಸಿನ್ಹಾ ಮುಂತಾದವರು ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಮಹಿಳೆಯರು ಮನ್ನೆಲೆಗೆ ಬರುವಂತಾಗಲು ಮೊದಲಾಗಿ ತಮ್ಮ ಯೋಚನಾ ಬದಲಿಸಬೇಕುಎಂದರು.
ಮೂಡುಬಿದಿರೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಶಶಿಕಲಾ, ಪತ್ರಕರ್ತೆ ಪ್ರೇಮಾಶ್ರೀ ಕಲ್ಲಬೆಟ್ಟು, ಟ್ರಾಫಿಕ್ ಪೊಲೀಸ್ ಸುನೀತಾ, ರ್ಯಾಂಕ್ ವಿಜೇತೆ ವಾಣಿ ಮಂಜುನಾಥ್‌ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಶಶಿಕಲಾ, ಭ್ರಷ್ಟಾಚಾರ ರಹಿತ ಹಾಗೂ ಪ್ರಾಮಾಣಿಕ ಸೇವೆಯಿಂದ ಮೂಡುಬಿದಿರೆ ಆಸ್ಪತ್ರೆಗೆ ಪ್ರಶಸ್ತಿ ದೊರಕಿದೆ. ಪ್ರಶಸ್ತಿಯ ಹಿಂದೆ ಆಸ್ಪತ್ರೆಯ ಎಲ್ಲ ವೈದ್ಯರ, ಸಿಬ್ಬಂದಿ ಹಾಗೂ ಸರಕಾರ, ವಿವಿಧ ಸಂಘಸಂಸ್ಥೆಗಳ ಶ್ರಮವಿದೆ. ಒಂದು ತಂಡವಾಗಿ ಕಾರ್ಯನಿರ್ವಹಿಸಿದ್ದು, ಮುಂದೆಯೂ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುತ್ತೇವೆಎಂದರು.
ಅಧ್ಯಕ್ಷ ರಾಜೇಶ್ ಬಂಗೇರ, ಕಾರ್ಯದರ್ಶಿ ಹರೀಶ್, ಮಹಿಳಾ ಘಟಕದ ಕಾರ್ಯದರ್ಶಿ ಸಾರಿಕಾ ಉಪಸ್ಥಿತರಿದ್ದರು. ಶಾಂತಲಾ ಸೀತರಾಮ ಆಚಾರ್ಯ ಸನ್ಮಾನಿತರ ವಿವರ ಓದಿದರು. ರಾಜೇಶ್ ಬಂಗೇರ ಸ್ವಾಗತಿಸಿದರು. ಪ್ರವೀಣ್ ಹಾಗೂ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಹರೀಶ್ ಧನ್ಯವಾದವಿತ್ತರು.







