ಪೆರುಂಬಾಡಿ ಚೆಕ್‌ಪೋಸ್ಟ್‌ಗೆ ಎಸಿಬಿ ದಾಳಿ
ಐವರ ಬಂಧನ: ಸಾವಿರಾರು ರೂ. ಅಕ್ರಮ ನಗದು ವಶ
ವೀರಾಜಪೇಟೆ, ಮಾ.9: ವೀರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುವ ಅಂತಾರಾಜ್ಯ ಹೆದ್ದಾರಿಯಲ್ಲಿನ ಪೆರುಂಬಾಡಿ ಚೆಕ್‌ಪೋಸ್ಟ್‌ನಲ್ಲಿರುವ ವಾಣಿಜ್ಯ ಇಲಾಖೆಯ ಮಾರಾಟ ತೆರಿಗೆ ಕೇಂದ್ರದ ಮೇಲೆ ಗುರುವಾರ ಮೈಸೂರು ಎಸಿಬಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ತೆರಿಗೆ ಕೇಂದ್ರದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಡಿಕೇರಿಯ ನಿವಾಸಿ ದೇವಾರಾಜು ಬಳಿ ಪತ್ತೆಯಾದ 30,900 ರೂ.ನ್ನು ಎಸಿಬಿ ವಶಕ್ಕೆ ಪಡೆದಿದೆ. ಈತ ಸೇರಿದಂತೆ ವಾಣಿಜ್ಯ ತೆರಿಗೆ ಅಧಿಕಾರಿ ನಿರಂಜನ್, ತೆರಿಗೆ ನಿರೀಕ್ಷಕ ನಾಗರಾಜು ಹಾಗೂ ಸಿಬ್ಬಂದಿಯಾದ ಗಿರೀಶ್ ಹಾಗೂ ಪುಟ್ಟೇಗೌಡ ಸೇರಿದಂತೆ ಒಟ್ಟು 5 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೇರಳ ರಾಜ್ಯಕ್ಕೆ ತೆರಳುವ ಅಂತಾರಾಜ್ಯ ಹೆದ್ದಾರಿಯಲ್ಲಿನ ಪೆರುಂಬಾಡಿಯಲ್ಲಿ ಸರಕಾರದ ವಾಣಿಜ್ಯ ಇಲಾಖೆಯ ಮಾರಾಟ ತೆರಿಗೆ ಸಂಗ್ರಹ ಕೇಂದ್ರವಿದ್ದು, ಇದು ರಾಜ್ಯ ಪ್ರವೇಶಿಸುವ ಸರಕುಗಳಿಗೆ ತೆರಿಗೆ ಪಾವತಿಯಾಗಿದೆಯೇ ಎಂದು ಪರಿಶೀಲನೆ ನಡೆಸಿ ತೆರಿಗೆ ಸಂಗ್ರಹ ಮಾಡುತ್ತದೆ. ಈ ಕೇಂದ್ರದ ಮೂಲಕ ನಿತ್ಯ ಅಧಿಕ ಸಂಖ್ಯೆಯಲ್ಲಿ ಸರಕು ಸಾಗಣೆ ವಾಹನಗಳು ಸಂಚರಿಸುತ್ತವೆ.
ಇಲ್ಲಿ ವ್ಯಾಪಕವಾಗಿ ಹಣದ ಲೂಟಿ ನಡೆಯುತ್ತಿರುವ ಬಗ್ಗೆ ದೂರು ಬಂದ ಬಳಿಕ ಖಚಿತ ಪಡಿಸಿಕೊಂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.







