ಜಾಮಿಯಾ ಮಸೀದಿ ವಿವಾದ: ನೂತನ ಬೈಲಾ ರದ್ದತಿಗೆ ಒತ್ತಾಯ
ಮಡಿಕೇರಿ, ಮಾ.9: ರಾಜ್ಯ ವಕ್ಫ್ ಮಂಡಳಿ ಅನುಮೋದಿಸಿರುವ ಮಡಿಕೇರಿ ಜಾಮಿಯಾ ಮಸೀದಿಯ ಬೈಲಾವನ್ನು ರದ್ದುಗೊಳಿಸಬೇಕು ಮತ್ತು ಮಹಾಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿ ಮಸೀದಿಗೆ ಸಂಬಂಧಿಸಿದ ಸಾರ್ವಜನಿಕ ಆಡಳಿತ ಮಂಡಳಿಯ ಪ್ರಮುಖರು ನಗರದಲ್ಲಿರುವ ಜಿಲ್ಲಾ ವಕ್ಫ್ ಕಚೇರಿ ಎದುರು ಧರಣಿ ನಡೆಸಿದರು.
ವಕ್ಫ್ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದ ಧರಣಿನಿರತರು ಮಸೀದಿ ಮತ್ತು ಶವಸಂಸ್ಕಾರದ ಪ್ರದೇಶ ಏಕ ವ್ಯಕ್ತಿಯದ್ದಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರ ಈ ಹಿಂದೆ ರಚಿಸಿದ ಬೈಲಾದ ಪ್ರಕಾರವೇ ಮಸೀದಿ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಬೇಕು. ಆದರೆ ಹಣ ಮತ್ತು ರಾಜಕೀಯ ಪ್ರಭಾವಕ್ಕೆ ಮಣಿದಿರುವ ವಕ್ಫ್ ಮಂಡಳಿ ಪ್ರತ್ಯೇಕ ಬೈಲಾ ರಚಿಸುವ ಮೂಲಕ ವ್ಯಕ್ತಿಯೊಬ್ಬರ ಸ್ವಾರ್ಥ ಸಾಧನೆಗೆ ಸಹಕರಿಸುತ್ತಿದೆ ಎಂದು ಆರೋಪಿಸಿದರು.
ನ್ಯಾಯಾಲಯದ ಆದೇಶವಿದ್ದರೂ ಮಹಾಸಭೆಯನ್ನು ಕರೆಯದೆ ನಿರ್ಲಕ್ಷ್ಯ ತೋರಲಾಗಿದೆ. ಶವಸಂಸ್ಕಾರಕ್ಕೂ ಅನುಮತಿಯ ಅಗತ್ಯವಿದೆ ಎಂದು ದಬ್ಬಾಳಿಕೆ ಮಾಡಲಾಗುತ್ತಿದ್ದು, ದಾನಿಗಳು ದಾನವಾಗಿ ನೀಡಿದ ಮಸೀದಿ ಜಾಗವನ್ನು ತಮ್ಮದೆಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ಖಾತೆ ಬದಲಾವಣೆಗೂ ನಗರಸಭೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಪ್ರಮುಖರು ಆರೋಪಿಸಿದರು. ಜಾಮಿಯಾ ಮಸೀದಿಯ ಆಸ್ತಿ ಸಾರ್ವಜನಿಕವಾಗಿ ಸರ್ವ ಮುಸಲ್ಮಾನರ ಆಸ್ತಿಯಾಗಿದ್ದು, ಸ್ವಾರ್ಥ ಸಾಧನೆಯ ಯಾವುದೋ ಒಬ್ಬ ವ್ಯಕ್ತಿಯ ಆಸ್ತಿಯಾಗಲು ಸಾಧ್ಯವಿಲ್ಲ ಮತ್ತು ಏಕವ್ಯಕ್ತಿ ಧೋರಣೆಗೂ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ನೂತನ ಬೈಲಾವನ್ನು ರಚಿಸಲಾಗಿದೆ. ಈ ಎಲ್ಲಾ ಗೊಂದಲಗಳಿಗೆ ರಾಜ್ಯ ವಕ್ಫ್ ಮಂಡಳಿ ಕಾರಣವೆಂದು ಟೀಕಿಸಿದ ಪ್ರಮುಖರು ನೂತನ ಬೈಲಾವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ನಂತರ ನಗರಸಭೆಗೆ ತೆರಳಿದ ಪ್ರಮುಖರು ಪೌರಾಯುಕ್ತರಾದ ಬಿ.ಶುಭಾ ಅವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಜಾಮಿಯಾ ಮಸೀದಿಯ ಆಸ್ತಿಯ ಖಾತೆಯನ್ನು ಬದಲಾಯಿಸಬಾರದು ಎಂದು ಮನವಿ ಮಾಡಿದರು.







