ರೈತರಿಗೆ ಬದುಕಲು ಬಿಡಿ : ಗ್ರಾಮಸ್ಥರ ಆಗ್ರಹ
ಹೆಬ್ರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

ಹೆಬ್ರಿ, ಮಾ.9: ರೈತರಿಗೆ ಉಚಿತ ವಿದ್ಯುತ್ ನೀಡುವುದು, ಮತ್ತೇ ನಿರಂತರ ಪವರ್ ಕಟ್ ಮಾಡುವುದು, ಜನರನ್ನು ಈ ರೀತಿ ಮೋಸ ಮಾಡಬೇಡಿ, ರಾತ್ರಿಯಾದರೂ ಸ್ವಲ್ಪ ವಿದ್ಯುತ್ ಕೊಡಿ ಎಂದು ಗ್ರಾಮಸ್ಥರಾದ ಚಾರದ ಹೆಚ್.ಕೆ. ಶ್ರೀಧರ ಶೆಟ್ಟಿ ಮೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.
ಅವರು ಹೆಬ್ರಿ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯ ಭವನದಲ್ಲಿ ಗುರುವಾರ ನಡೆದ ಮೆಸ್ಕಾಂ ಜನಸಂಪರ್ಕ ಸಬೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ ಮಾತನಾಡಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸಂಪರ್ಕ ಸಭೆಯನ್ನು ಮಾಡಿ ಎಂದು ಮನವಿ ಮಾಡಿ ವಿದ್ಯುತ್ ಗ್ರಾಹಕರ ಸಮಸ್ಯೆ ಆಲಿಸಿ ಬಗೆಹರಿಸುವ ಸೌಜನ್ಯವನ್ನು ತೋರಿಸುವಂತೆ ಒತ್ತಾಯಿಸಿದರು. ನಾಡ್ಪಾಲಿನ ರಂಗನಾಥ ಪೂಜಾರಿ ವಿದ್ಯುತ್ ಬಿಲ್ಲು ಬಂದು ಮೂರೇ ದಿನಕ್ಕೆ ಬಿಲ್ಲು ಪಾವತಿಸಿಲ್ಲ ಎಂದು ಸಂಪರ್ಕ ರದ್ದು ಪಡಿಸುವುದು ಸರಿಯಲ್ಲ ಎಂದರು.
ಪಂಚಾಯಿತಿ ಅಧ್ಯಕ್ಷರಾದ ಹೆಬ್ರಿಯ ಸುಧಾಕರ ಹೆಗ್ಡೆ, ಕಡ್ತಲದ ಅರುಣ್ ಕುಮಾರ್ ಹೆಗ್ಡೆ, ವರಂಗದ ಸುರೇಂದ್ರ ಶೆಟ್ಟಿ, ಪಂಚಾಯಿತಿ ಸದಸ್ಯರು, ಗ್ರಾಮಸ್ಥರಾದ ಸಮೃದ್ಧಿ ಪ್ರಕಾಶ ಶೆಟ್ಟಿ, ಸುರೇಂದ್ರ ಕಾಮತ್, ರಾಜೀವ ಶೆಟ್ಟಿ, ಸುಂದರ ಶೆಟ್ಟಿ ಮತ್ತಿತರರು ಮೆಸ್ಕಾಂನ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ಪ್ರಭಾರ ಅಧೀಕ್ಷಕ ಎಂಜಿನಿಯರ್ ದಿಶೇಶ್ ಉಪಾಧ್ಯಾಯ ಗ್ರಾಹಕರ ಅಹವಾಲು ಆಲಿಸಿದರು. ಮೆಸ್ಕಾಂ ಹೆಬ್ರಿ ಉಪವಿಭಾಗದ ಮುಖ್ಯಸ್ಥ ರಘುನಾಥ್, ಜೂನಿಯರ್ ಎಂಜಿನಿಯರ್ ಸಂದೀಪ್, ಮೆಸ್ಕಾಂ ಅಧಿಕಾರಿಗಳು ಹಾಜರಿದ್ದರು.







