ಮಹಿಳಾ ದೌರ್ಜನ್ಯದ ವಿರುದ್ಧ ಗಾಯಕಿಯ ಅಭಿಯಾನಕ್ಕೆ ಅಪೂರ್ವ ಸ್ಪಂದನೆ
ಹೈದರಾಬಾದ್, ಮಾ.9: ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಆರಂಭಿಸಿರುವ ರೇಪ್‌ಥ್ರೆಟ್ಸ್‌ನಾಟ್‌ಓಕೆ ಟ್ವೀಟ್ ಅಭಿಯಾನಕ್ಕೆ ಕೇವಲ 48 ಗಂಟೆಗಳಲ್ಲಿ 48 ಸಾವಿರ ಮಂದಿಯ ಬೆಂಬಲ ಸಿಕ್ಕಿದೆ. ಚೇಂಜ್.ಓಆರ್‌ಜಿ ಮೂಲಕ ಈ ಅಭಿಯಾನ ಆರಂಭಿಸಿದ್ದು, ಟ್ವಿಟ್ಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೇರ ಆಗ್ರಹವನ್ನು ಈ ಅಭಿಯಾನ ಒಳಗೊಂಡಿದೆ.
ಟ್ವೀಟ್ ಮೂಲಕ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕುವ ಟ್ವೀಟ್ ಖಾತೆಗಳನ್ನು ದೊಡ್ಡ ಪ್ರಮಾಣದಲ್ಲಿ ಕಿತ್ತುಹಾಕುವ ಮೂಲಕ ಪ್ರಬಲವಾದ ಸಂದೇಶ ರವಾನಿಸಿ ಎಂದು ಟ್ವಿಟ್ಟರ್ ಸಿಇಒ ಜಾಕ್ ದೋರ್ಸೆ ಅವರನ್ನು ಆಗ್ರಹಿಸಲಾಗಿದೆ.
ವಿಶ್ವಾದ್ಯಂತ ಇಂಥ ಮೈಕ್ರೊ ಬ್ಲಾಗಿಂಗ್ ಜಗತ್ತು ಹಾಗೂ ಸಮಾಜ ಮಾಧ್ಯಮ ಮಹಿಳೆಯರ ಪಾಲಿಗೆ ಹೇಗೆ ಮಾರಕವಾಗುತ್ತಿದೆ ಎನ್ನುವುದನ್ನು ಚಿನ್ಮಯಿ ವಿವರಿಸಿದ್ದು, ಇಂಥ ಶೋಷಣೆಯನ್ನು ತಡೆಯಲು ಇದು ಸೂಕ್ತ ಕಾಲ ಎಂದು ಪ್ರತಿಪಾದಿಸಿದ್ದಾರೆ. ಕೆಲ ಪುರುಷರು ಅತ್ಯಾಚಾರ ಬೆದರಿಕೆ ದೊಡ್ಡ ಸಂಗತಿಯೇ ಅಲ್ಲ ಎಂದುಕೊಂಡಿದ್ದಾರೆ. ಆದರೆ ಅತ್ಯಾಚಾರ ಎನ್ನುವುದು ಅತ್ಯಂತ ಹೇಯ ಕೃತ್ಯ ಹಾಗೂ ಮಾನಸಿನ ಹಿಂಸೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅನುಭವಿಸುವ ಸಂಕಷ್ಟ ವಿವರಿಸಲು ಪದಗಳೇ ಸಿಗುವುದಿಲ್ಲ ಎಂದು ಹೇಳಿದ್ದರು. ಶ್ರೀಲಂಕಾ ನೌಕಾಪಡೆ, ತಮಿಳು ಮೀನುಗಾರರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಚಿನ್ಮಯಿ ಧ್ವನಿ ಎತ್ತಿದಾಗ ಇವರಿಗೆ ಮೊದಲ ಬಾರಿಗೆ ಅತ್ಯಾಚಾರದ ಬೆದರಿಕೆ ಬಂದಿತ್ತು.
ಅಂಥ ಖಾತೆಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತುಹಾಕಬೇಕು ಎಂದು ಅಂದಿನಿಂದ ಇಂದಿನವರೆಗೂ ಆಗ್ರಹಿಸುತ್ತಾ ಬಂದಿದ್ದೇನೆ. ನನ್ನ ನಿಲುವಿಗೆ ನಾನು ಬದ್ಧ. ಅತ್ಯಾಚಾರ ಹಾಗೂ ಅತ್ಯಾಚಾರದ ಬೆದರಿಕೆ ಮಹಿಳೆಯರ ಸದ್ದಡಗಿಸುವ ಹುನ್ನಾರ. ಆ ಒತ್ತಡಕ್ಕೆ ನಾನು ಮಣಿಯುವುದಿಲ್ಲ. ಈ ಬಗ್ಗೆ ಟ್ವಿಟ್ಟರ್ ಅಧಿಕಾರಿಗಳನ್ನೂ ಸಂಪರ್ಕಿಸಿದಾಗ, ಪೊಲೀಸರಿಗೆ ದೂರು ನೀಡದೇ ಯಾವ ಕ್ರಮವನ್ನೂ ಕೈಗೊಳ್ಳುವಂತಿಲ್ಲ ಎಂಬ ಉತ್ತರ ದೊರಕಿದೆ ಎಂದು ಅವರು ವಿವರಿಸಿದ್ದಾರೆ.