ನಾಯ್ಡು ಪುತ್ರನ ಸಂಪತ್ತು 5 ತಿಂಗಳಲ್ಲಿ ಎಷ್ಟು ಪಟ್ಟು ಹೆಚ್ಚಾಗಿದೆ ಗೊತ್ತೇ ?
ಹೈದರಾಬಾದ್,ಮಾ.9: ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸಲು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕೆಂದು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪತ್ರ ಬರೆದಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಎನ್. ಲೋಕೇಶ್ ಅವರ ಆಸ್ತಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ರೂ. 14.5 ಕೋಟಿಯಷ್ಟಿದ್ದರೆ ಫೆಬ್ರವರಿ ಅಂತ್ಯದ ವೇಳೆಗೆ ರೂ. 330 ಕೋಟಿಯಷ್ಟಾಗಿ ಎಲ್ಲರ ಹುಬ್ಬೇರಿಸಿದೆ, ಸೋಮವಾರ ರಾಜ್ಯ ವಿಧಾನ ಪರಿಷತ್ತಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗದ ಮುಂದೆ ಸಲ್ಲಿಸಿದ ಅಫಿದವಿತ್ ನಲ್ಲಿ 34 ವರ್ಷದ ಲೋಕೇಶ್ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಘೋಷಣೆ ಮಾಡಿದ್ದಾರೆ.
ತಮ್ಮ ಕುಟುಂಬದ ಒಡೆತನದ ಹೆರಿಟೇಜ್ ಫುಡ್ಸ್ ಲಿ. ಇದರಲ್ಲಿ ತನ್ನ ಷೇರುಗಳ ವೌಲ್ಯವಾಗಿ ರೂ. 273,83,94,966 ಚರಾಸ್ತಿಯನ್ನು ಅವರು ಘೋಷಿಸಿದ್ದಾರೆ. ಈ ಕಂಪೆನಿಯ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ ಲೋಕೇಶ್. ಅಂತೆಯೇ ತಮ್ಮ ಬಳಿ ರೂ 18 ಕೋಟಿ ವೌಲ್ಯದ ಸ್ಥಿರಾಸ್ತಿಯಿರುವುದಾಗಿಯೂ ಲೋಕೇಶ್ ಘೋಷಿಸಿದ್ದಾರೆ. ಇದರ ಹೊರತಾಗಿ ತಮಗೆ ಕುಟುಂಬದಿಂದ ಬಳುವಳಿಯಾಗಿ ಬಂದ ರೂ. 38.51 ಕೋಟಿ, ಸಾಲ ರೂಪದ 6.28 ಕೋಟಿ ಹೀಗೆ ಒಟ್ಟು ರೂ. 330 ಕೋಟಿ ವೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಲೋಕೇಶ್ ರೂ.14.50 ಕೋಟಿ ಆಸ್ತಿ ಹಾಗೂ ರೂ. 6.35 ಕೋಟಿ ಸಾಲವಿರುವುದಾಗಿ ತಮ್ಮ ಆಸ್ತಿ ಘೋಷಣಾ ಪತ್ರದಲ್ಲಿ ತಿಳಿಸಿದ್ದರು. ಅವರ ಪತ್ನಿ ಬ್ರಾಹ್ಮಣಿ ಬಳಿ ರೂ. 5.38 ಕೋಟಿ ವೌಲ್ಯದ ಆಸ್ತಿ ಹಾಗೂ ಒಂದು ವರ್ಷದ ಪುತ್ರ ದೇವಾಂಶ್ ಬಳಿ ರೂ. 11.17 ಕೋಟಿ ವೌಲ್ಯದ ಆಸ್ತಿ ಇರುವುದಾಗಿಯೂ ಘೋಷಿಸಿದ್ದರು.
ಕೇವಲ ಐದು ತಿಂಗಳ ಅವಧಿಯಲ್ಲಿ ತಮ್ಮ ಆಸ್ತಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಲೋಕೇಶ್ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ತಾವು ತಮ್ಮ ಆಸ್ತಿ ಪಡೆದಾಗ ಇದ್ದ ಅದರ ವೌಲ್ಯವನ್ನು ತಿಳಿಸಿದ್ದರೆ ಈಗ ಚುನಾವಣಾ ಆಯೋಗದ ನಿಯಮದ ಪ್ರಕಾರ ಅದರ ಮಾರುಕಟ್ಟೆ ವೌಲ್ಯವನ್ನು ನೀಡಿದ್ದಾಗಿ ಸಮಜಾಯಿಷಿ ನೀಡಿದ್ದಾರಲ್ಲದೆ ಕಳೆದ ಐದು ತಿಂಗಳಲ್ಲಿ ತಾವೇನೂ ಹೊಸ ಆಸ್ತಿ ಖರೀದಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.