ಚುನಾವಣೆಯ ಫಲಿತಾಂಶ ಕುತೂಹಲ: ಯಾವ ರಾಜ್ಯ ಯಾರ ಮಡಿಲಿಗೆ?
ಮತಗಟ್ಟೆ ಸಮೀಕ್ಷೆಯ ವಿವರಗಳಿಗೆ ಕ್ಲಿಕ್ ಮಾಡಿ

ಹೊಸದಿಲ್ಲಿ, ಮಾ.10: ಪಂಚರಾಜ್ಯ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮತಗಟ್ಟೆ ನಿರ್ಗಮನ ಸಮೀಕ್ಷೆ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. ಶನಿವಾರ ಫಲಿತಾಂಶ ಪ್ರಕಟವಾಗಲಿದ್ದು, ಗುರುವಾರ ನಡೆಸಿದ ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಲಿದೆ. ಪಂಜಾಬ್‌ನಲ್ಲಿ ಆಡಳಿತಾರೂಢ ಶಿರೋಮಣಿ ಅಕಾಲಿದಳ- ಬಿಜೆಪಿ ಮೈತ್ರಿಕೂಟಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಇಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ನಡುವೆ ಹಣಾಹಣಿ ಏರ್ಪಡುವ ಸಾಧ್ಯತೆಯನ್ನು ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿವೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಸ್ಪಷ್ಟ ಬಹುಮತಕ್ಕೆ ಬೇಕಾದ 202 ಸ್ಥಾನಗಳ ಸನಿಹಕ್ಕೆ ಬರಲಿದೆ ಎಂದು ಐದು ಸಮೀಕ್ಷೆಗಳು ಅಂದಾಜು ಮಾಡಿವೆ. ಎರಡು ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಬಹುಮತ ಅಂದಾಜು ಮಾಡಿದ್ದು, 285 ಸ್ಥಾನ ಗಳಿಸುವ ನಿರೀಕ್ಷೆ ಇವೆ ಎಂದು ಹೇಳಿದೆ. ಎರಡನೇ ಸ್ಥಾನ ಕಾಂಗ್ರೆಸ್- ಎಸ್ಪಿ ಮೈತ್ರಿಕೂಟಕ್ಕೆ ಲಭ್ಯವಾಗಲಿದ್ದು, ಬಿಎಸ್ಪಿ ಹಿಂದುಳಿಯಲಿದೆ. 100ಕ್ಕಿಂತ ಕಡಿಮೆ ಸ್ಥಾನಗಳನ್ನು ಬಿಎಸ್ಪಿ ಗೆಲ್ಲುವ ಸಾಧ್ಯತೆ ಇದೆ. ಎರಡು ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ನಡುವೆ ಅಧಿಕಾರಕ್ಕೆ ನಿಕಟ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ಅಂದಾಜು ಮಾಡಿವೆ.
ಇಂಡಿಯಾ ಟಿವಿ- ಎಬಿಪಿ ನ್ಯೂಸ್ ಸಮೀಕ್ಷೆಯ ಪ್ರಕಾರ 145- 160 ಸ್ಥಾನಗಳು ಈ ಮೈತ್ರಿಕೂಟಕ್ಕೆ ಸಿಗಲಿದ್ದು, ಬಹುಮತಕ್ಕೆ 50 ಸ್ಥಾನ ಕೊರತೆಯಾಗಬಹುದು. ಆದರೆ ಟೈಮ್ಸ್ ನೌ ಅಂದಾಜಿನ ಪ್ರಕಾರ ಮೈತ್ರಿಕೂಟಕ್ಕೆ 120 ಸ್ಥಾನಗಳಷ್ಟೆ ಸಿಗಲಿವೆ.
ಆದರೆ ಬಿಜೆಪಿ- ಅಕಾಲಿ ದಳ ಕೂಟ ಪಂಜಾಬ್‌ನಲ್ಲಿ ನಾಮಾವಶೇಷವಾಗಲಿದ್ದು, 10ಕ್ಕಿಂತಲೂ ಕಡಿಮೆ ಸ್ಥಾನಕ್ಕೆ ಕುಸಿಯಲಿದೆ ಎಂದು ನಾಲ್ಕು ಸಮೀಕ್ಷೆಗಳು ಹೇಳಿವೆ. ಆದರೆ ಅಧಿಕಾರ ಎಎಪಿ ಅಥವಾ ಕಾಂಗ್ರೆಸ್ ಪಾಲಾಗಬಹುದು ಎನ್ನುವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಮೀಕ್ಷೆಗಳಿಂದ ವ್ಯಕ್ತವಾಗಿದೆ. ಕಾಂಗ್ರೆಸ್ ಹಾಗೂ ಎಎಪಿ ತಲಾ 50 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇದ್ದು, 117 ಸದಸ್ಯರ ಸದನದಲ್ಲಿ ಸ್ಪಷ್ಟ ಬಹುಮತಕ್ಕೆ 59 ಸ್ಥಾನ ಬೇಕು. ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 71 ಸ್ಥಾನಗಳನ್ನು ಹಾಗೂ ಎಎಪಿ 51 ಸ್ಥಾನ ಗೆಲ್ಲಬಹುದು. ಇಂಡಿಯಾ ಟಿವಿ ಮಾತ್ರ ಎಎಪಿ ಮೇಲುಗೈ ಸಾಧಿಸುತ್ತದೆ ಎಂದು ಅಂದಾಜು ಮಾಡಿದ್ದು, 67 ಸ್ಥಾನಗಳನ್ನು ನೀಡಿದೆ. ಕಾಂಗ್ರೆಸ್ 49 ಸ್ಥಾನಗಳನ್ನಷ್ಟೇ ಗೆಲ್ಲಬಲ್ಲದು ಎನ್ನುವುದು ಅದರ ನಿರೀಕ್ಷೆ.
ಗೋವಾ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದರೂ, ಕಾಂಗ್ರೆಸ್ ಸಾಧನೆ ತೀರಾ ಕಳಪೆಯಾಗುವ ಸಾಧ್ಯತೆ ಇಲ್ಲ. ಆದರೆ ಗೋವಾದಲ್ಲಿ ಎಎಪಿ ಐದಾರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯೂ ಇಲ್ಲ. ನ್ಯೂಸ್ 24 ಹಾಗೂ ಇಂಡಿಯಾ ಟುಡೇ ಸಮೀಕ್ಷೆಗಳ ಪ್ರಕಾರ ಉತ್ತರಾಖಂಡದಲ್ಲಿ ಬಿಜೆಪಿಗೆ 53 ಸ್ಥಾನ ಲಭಿಸಲಿದೆ. ಗೋವಾದಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದರೂ ಕಾಂಗ್ರೆಸ್ ನಿಕಟಸ್ಪರ್ಧೆ ನೀಡಲಿದೆ. ಬಿಜೆಪಿ 22 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದ್ದು, ಕಾಂಗ್ರೆಸ್ 18 ಸ್ಥಾನಗಳವರೆಗೂ ಗೆಲ್ಲಬಹುದು ಎಂದು ಇಂಡಿಯಾ ಟಿವಿ ಹಾಗೂ ಇಂಡಿಯಾ ಟುಡೇ ಅಂದಾಜು ಮಾಡಿದೆ. ಮಣಿಪುರದ 60 ಸದಸ್ಯಬಲದ ಸದನದಲ್ಲಿ ಎರಡೂ ಪಕ್ಷಗಳ ಗೆಲ್ಲುವ ಸಾಧ್ಯತೆ ಸಮಾನವಾಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.