ರಾಮ್ ಗೋಪಾಲ್ ವರ್ಮರನ್ನು ಜೈಲಿಗೆ ಹಾಕಿ :ಶಿವಸೇನೆ
ಮಹಿಳಾ ದಿನಾಚರಣೆಗೆ ಆಕ್ಷೇಪಾರ್ಹ ಟ್ವೀಟ್

ಮುಂಬೈ, ಮಾ.10: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಕ್ಷೇಪಾರ್ಹ ಟ್ವೀಟ್ ಮಾಡಿ ಶುಭಾಶಯ ಕೋರಿ ತೀವ್ರ ಟೀಕೆ ಹಾಗೂ ವಿರೋಧಗಳಿಗೆ ಗುರಿಯಾಗಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮರನ್ನು ಜೈಲಿಗೆ ಹಾಕುವಂತೆ ಶಿವಸೇನೆ ಒತ್ತಾಯಿಸಿದೆ.
ರಾಮ್ ಗೋಪಾಲ್ ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಪ್ರತಿಯೊಬ್ಬ ಮಹಿಳೆಯೂ ಸನ್ನಿ ಲಿಯೋನ್ ರೀತಿ ಪುರುಷರನ್ನು ಹೇಗೆ ಸಂತೋಷವಾಗಿಡಬೇಕೆಂಬುದನ್ನು ಕಲಿಯಬೇಕು ಎಂದು ಹೇಳಿದ್ದರು. ಈ ಟ್ವೀಟ್ ಗೆ ಎನ್ ಸಿಪಿ ನಾಯಕ ಜಿತೇಂದ್ರ ಅವಾದ್ ಮತ್ತು ವರ್ಮ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಸಗಿತ್ತು.
ತಮ್ಮ ಟ್ವೀಟ್ ಕುರಿತಂತೆ ವರ್ಮ ಕ್ಷಮೆಯಾಚಿಸಿದ್ದರೂ, ಶಿವಸೇನೆ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಮ್ ಅವರ ಹೇಳಿಕೆಯು ಎಂಎಲ್‌ಸಿ ಪ್ರಶಾಂತ್ ಪರಿಚಾರಕ್ ಅವರ ಹೇಳಿಕೆಯಂತೆ ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ಶಿವಸೇನೆ ಮುಖವಾಣಿ "ಸಾಮ್ನಾ”ದಲ್ಲಿ ಹೇಳಿದೆ.
ಎಂಎಲ್‌ಸಿ ಪ್ರಶಾಂತ್ ಪರಿಚಾರಕ್ ರ‍್ಯಾಲಿಯೊಂದರಲ್ಲಿ ಯೋಧರ ಪತ್ನಿಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಈ ಆರೋಪದಲ್ಲಿ ಪ್ರಶಾಂತ್ ಪರಿಚಾರಕ್ ಅವರನ್ನು ಒಂದೂವರೆ ವರ್ಷಗಳ ಕಾಲ ಸದನದಿಂದ ಅಮಾನತು ಮಾಡಲಾಗಿತ್ತು.





