ಕಾಂಗ್ರೆಸ್ ಸೋತರೆ ಎಐಎಂಐಎಂ ಅದಕ್ಕೆ ಜವಾಬ್ದಾರವಲ್ಲ: ಉವೈಸಿ

ಮುಂಬೈ,ಮಾ. 10: ಅಖಿಲಭಾರತ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸದುದ್ದೀನ್ ಉವೈಸಿ ಉತ್ತರ ಪ್ರದೇಶದಲ್ಲಿ ಜಾತ್ಯತೀತ ಮತಗಳ ವಿಭಜನೆಗೆ ಎಐಎಂಐಎಂ ಕಾರಣ ಎನ್ನುವ ಆರೋಪವನ್ನು ನಿರಾಕರಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸೋತರೆ ಅದಕ್ಕೆ ಎಐಎಂಐಎಂ ಹೊಣೆಯಲ್ಲ ಎಂದು ಉವೈಸಿ ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಜಾತ್ಯತೀತ ಮತಗಳನ್ನು ವಿಭಜಿಸಿ ಬಿಜೆಪಿಯನ್ನು ಗೆಲುವಿಗೆ ಸಹಕರಿಸುವ ಆರೋಪ ಎಐ ಎಂಐಎಂ ವಿರುದ್ಧ ಕೇಳಿ ಬಂದಿವೆ.
ಕಾಂಗ್ರೆಸ್ ನಮ್ಮನ್ನು ಮುಸ್ಲಿಂ ಓಟುಗಳ ವಿಭಜನೆಗೆ ಹೊಣೆ ಮಾಡುತ್ತಿದೆ ವಾಸ್ತವದಲ್ಲಿ ಕಾಂಗ್ರೆಸ್‌ನ ಹಿಂದೂ ಮತಗಳು ಬಿಜೆಪಿಯ ಕಡೆಗೆ ಹೋಗಿವೆ. ನಾನು ಜಾತ್ಯತೀತ ಪಕ್ಷಗಳ ಜೀವನ ನರಕವಾಗಿಸಿದೆ ಎಂದು ಕಾಂಗ್ರೆಸ್ ನಾಯಕರು ನನಗೆ ಶಾಪ ಹಾಕುತ್ತಿದ್ದಾರೆ. ಆದರೆ, ಯಾವುದೆ ಪ್ರಯತ್ನಗಳಿಲ್ಲದೆ ನನ್ನ ಸಾರ್ವಜನಿಕ ಸಭೆಗಳಿಗೆ 5000 ಜನರು ಸೇರುತ್ತಿದ್ದರು. ಇದರಲ್ಲಿ ಶೇ.90ರಷ್ಟು ಮಂದಿ ಯುವಕರಾಗಿದ್ದಾರೆ ಎಂದು ಉವೈಸಿ ಹೇಳಿದ್ದಾರೆ.
ತನ್ನ ಪಾರ್ಟಿ ಯಾವತ್ತೂ ಒಡಿಸ್ಸ, ಜಮ್ಮು ಮತ್ತು ಕಾಶ್ಮೀರ, ದಿಲ್ಲಿ, ಹರಿಯಾಣಗಳಲ್ಲಿ ಎಐಎಂಐಎಂ ಚುನಾವಣೆಗೆ ನಿಂತಿಲ್ಲ. ಆದರೆ ಅಲ್ಲಿಯೂ ಕಾಂಗ್ರೆಸ್‌ನ ಪರಿಸ್ಥಿತಿ ಚಿಂತಾಜನಕವಾಗಿದೆ. ಕಾಂಗ್ರೆಸ್ ನಾಯಕರು ಎಐಎಂಐಎಂ ಕೇವಲ ಹೈದರಾಬಾದ್ ಪಾರ್ಟಿ ಎಂದು ಭಾವಿಸಿದ್ದಾರೆ. ಅದು ಅಲ್ಲಿಯೇ ಇರಬೇಕು. ಹೊರಗೆ ಕಾಲಿಡಬಾರದೆಂದು ಭಾವಿಸುತ್ತಿದ್ದಾರೆಂದು ಉವೈಸಿ ಟೀಕಿಸಿದರು.
ಲಾತೂರ್ ರ್ಯಾಲಿಯನ್ನು ಉದ್ದೇಶಿಸಿ ಮಾತಾಡಿದ ಅಸದುದ್ದೀನ್ ಐಕ್ಯಕ್ಕೆ ಕರೆ ನೀಡಿದರು. ಮುಸ್ಲಿಮರು ಮತ್ತು ಇತರರು ಅವರ ಹಕ್ಕುಗಳಿಗಾಗಿ ಒಗ್ಗೂಡಿ ಕೆಲಸ ಮಾಡಬೇಕು. ಸಂವಿಧಾನವನ್ನು ರಕ್ಷಿಸಬೇಕು. ಎಂದು ಹೇಳಿದ್ದಾರೆ. ಅನೈಕ್ಯದಿಂದ ರಾಜಕೀಯ ಪಕ್ಷಗಳು ಲಾಭ ಎತ್ತುತ್ತಿವೆ ಎಂದು ಉವೈಸಿ ಜನರನ್ನು ಎಚ್ಚರಿಸಿದರೆಂದು ವರದಿ ತಿಳಿಸಿದೆ.