ಮಂಗಳೂರು: ಮಾ.12ರಂದು 'ಫಾದರ್ ಮುಲ್ಲರ್ ಸಮ್ಮೇಳನ ಸಭಾಂಗಣ' ಲೋಕಾರ್ಪಣೆ

ಮಂಗಳೂರು, ಮಾ.10: ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಫಾದರ್ ಮುಲ್ಲರ್ ಸಂಸ್ಥೆಯ ವತಿಯಿಂದ ಸುಮಾರು 50 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿನೂತನ ಸಮ್ಮೇಳನ ಸಭಾಂಗಣ ಮಾ. 12ರಂದು ಉದ್ಘಾಟನೆಗೊಳ್ಳಲಿದೆ.
ಫಾದರ್ ಮುಲ್ಲರ್ ಆಸ್ಪತ್ರೆಯ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ನೂತನ ಸಭಾಂಗಣದ ಬಗ್ಗೆ ಮಾಹಿತಿ ನೀಡಿದ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆ ನಿರ್ದೇಶಕ ರೆವೆರೆಂಡ್ ಫಾದರ್ ಪ್ಯಾಟ್ರಿಕ್ ರಾಡ್ರಿಗಸ್, ಅಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಆರ್ಚ್‌ಬಿಷಪ್ ಬರ್ನಾರ್ಡ್ ಮೊರಾಸ್ ಲೋಕಾರ್ಪಣೆಗೈಯ್ಯಲಿರುವರು ಎಂದರು.
ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದಾರೆ.
ಎಫ್‌ಎಂಸಿಐ ಉಪಾಧ್ಯಕ್ಷ ಹಾಗೂ ಪ್ರಧಾನ ವಿಕಾರ್ ರೆವೆರೆಂಡ್ ಮೊನ್ಸಿಜೊರ್ ಡೆನಿಸ್ ಮೊರಾಸ್, ಸಚಿವರಾದ ಬಿ. ರಮಾನಾಥ ರೈ, ಯು.ಟಿ.ಖಾದರ್, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಜೆ.ಆರ್. ಲೋಬೋ ಮೊದಲಾದವರು ಭಾಗವಹಿಸಲಿದ್ದಾರೆ.
ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಭಾಗೃಹದ ಕೊರತೆಯಿಂದಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆ ಕಳೆದುಕೊಳ್ಳಬೇಕಾಯಿತು. ಆ ಹಿನ್ನೆಲೆಯಲ್ಲಿ ಆಕರ್ಷಕ ಹಾಗೂ ವಿನೂತನವಾಗಿ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಪೂರಕವಾಗುವಂತೆ ಸಭಾಗೃಹವನ್ನು ರೂಪಿಸಲಾಗಿದ್ದು, ಒಂದೇ ಛಾವಣಿಯಡಿ ಮುಲ್ಲರ್ ಸಭಾಗೃಹ, ಮುಲ್ಲರ್ ಡೈನ್, ಮುಲ್ಲರ್ ಮಿನಿ ಹಾಲ್ ನಿರ್ಮಾಣವಾಗಿದೆ. ಇತರ ಸಾಮಾನ್ಯ ಸೌಲಭ್ಯಗಳಾದ ಗ್ರೀನ್‌ರೂಂ, ವಾಶ್‌ರೂಂಗಳಂತಹ ಸೌಲಭ್ಯಗಳ ಜತೆ ಅತ್ಯಾಧುನಿಕ ಲೈಟಿಂಗ್ ವ್ಯವಸ್ಥೆ ಹಾಗೂ ಬೋಸ್‌ನ ವಿಶಿಷ್ಟ ಸೌಂಡಿಂಗ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎಂದು ಫಾ. ಪ್ಯಾಟ್ರಿಕ್ ರಾಡ್ರಿಗಸ್ ತಿಳಿಸಿದರು.
ಮಲ್ಲಿ ಸ್ಟೋರಿಂಗ್ ಪಾರ್ಕಿಂಗ್ ವ್ಯವಸ್ಥೆಯು ಈ ಕಟ್ಟಡದ ಮತ್ತೊಂದು ವಿಶೇಷತೆಯಾಗಿದ್ದು, 700 ಕಾರುಗಳನ್ನು ಪಾರ್ಕ್ ಮಾಡುವ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ. ಲಿಫ್ಟ್ ಹಾಗೂ ಎಸ್ಕಲೇಟರ್, ಸಂಪೂರ್ಣ ದೃಶ್ಯ ಮಾಧ್ಯಮ ಹಾಗೂ ಐಟಿ ಸಲಕರಣೆಗಳು, ವೈಫೈ ಸಂಪರ್ಕ, ತುರ್ತು ನಿರ್ಗಮನ ವ್ಯವಸ್ಥೆ, ಹೊಗೆ ಪರೀಕ್ಷಕ, ಬೆಂಕಿ ಅಲರಾಂ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಸಭಾಗೃಹ ಆವರಣಕ್ಕೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಂಪ್‌ವೆಲ್ ಗೇಟ್‌ನಿಂದ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯೂ ಇದೆ. ಇದು ಫದಾರ್ ಮುಲ್ಲರ್ ಸಂಸ್ಥೆಯ ವಿಶಿಷ್ಟ ಹಾಗೂ ಬೃಹತ್ ಯೋಜನೆಯಾಗಿದ್ದು, ನಗರದ ಕ್ರೈಸ್ತ ದರ್ಮ ಪ್ರಾಂತ್ಯದಲ್ಲೇ ಅತಿದೊಡ್ಡ ಸಭಾಗೃಹ ಇದಾಗಿದೆ. ಸಾಮಾಜಿಕ, ಸಾಂಸ್ಕೃತಿಕ ಕಾರ್ಯ್ರಮಗಳ ಜತೆ ಶೈಕ್ಷಣಿಕ ಸಭೆ, ಸಮಾರಂಭಗಳಿಗೂ ಇದು ಲಭ್ಯವಾಗಲಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರಿಚ್ಚರ್ಡ್ ಕುವೆಲ್ಲೋ, ಸಹ ಆಡಳಿತಾಧಿಕಾರಿ ಫಾ. ಅಜಿತ್ ಮಿನೆಜಸ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರೋಶನ್, ದೇರಳಕಟ್ಟೆ ಹೋಮಿಯೋಪತಿ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ವಿನ್ಸೆಂಟ್ ಸಲ್ಡಾನಾ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನ ಸಭಾಂಗಣದ ವಿಶೇಷತೆಗಳು:
- ಮುಲ್ಲರ್ ಸಭಾಗೃಹವು 38750 ಚದರ ಅಡಿ ವಿಸ್ತಾರದಿಂದ ಕೂಡಿದ್ದು, 3500 ಚದರ ಅಡಿಯ ವಿಶಾಲ ವೇದಿಕೆಯನ್ನು ಒಳಗೊಂಡಿದೆ.
- 1,750 ಮಂದಿ ಏಕಕಾಲದಲ್ಲಿ ಆಸೀನರಾಗುವ ವ್ಯವಸ್ಥೆ.
- 5,600 ಚದರ ಅಡಿ ವಿಸ್ತೀರ್ಣದ ಮಿನಿಹಾಲ್‌ನಲ್ಲಿ 500 ಮಂದಿ ಆಸೀನರಾಗುವ ವ್ಯವಸ್ಥೆ.
- ಏಕಕಾಲಕ್ಕೆ 1,000 ಮಂದಿಗೆ ಭೋಜನ ಮಾಡುವ ಭೋಜನಾಲಯ.







