ಪಕ್ಷ ಸೇರ್ಪಡೆ ಹೆಸರಲ್ಲಿ ಜಾತೀಯತೆ ಬೀಜ ಬಿತ್ತುತ್ತಿರುವ ಬಿಎಸ್‌ವೈ: ಮಧು ಬಂಗಾರಪ್ಪ ಕಿಡಿ

ಕುಮುಟಾ, ಮಾ.10: ಪಕ್ಷ ಸೇರ್ಪಡೆ ಹೆಸರಿನಲ್ಲಿ ಬಿ.ಎಸ್. ಯಡಿಯೂರಪ್ಪ ಜಾತೀಯತೆ ಬೀಜ ಬಿತ್ತುತ್ತಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯಲು ಯಡಿಯೂರಪ್ಪ ಏನು ಬೇಕಾದರೂ ಮಾಡುತ್ತಾರೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಕಿಡಿ ಕಾರಿದರು.
ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಶುಕ್ರವಾರ ಮಾತನಾಡಿದ ಮಧು ಬಂಗಾರಪ್ಪ, ಟಿಕೆಟ್ ಆಸೆ ತೋರಿಸಿ ಅಲ್ಪಸಂಖ್ಯಾತರ ಮನವೊಲಿಕೆಗೆ ಬಿ.ಎಸ್. ಯಡಿಯೂರಪ್ಪ ಯತ್ನಿಸುತ್ತಿದ್ದಾರೆ. ಪಕ್ಷ ತೊರೆದು ಹೋದವರಿಂದಲೇ ಪಕ್ಷ ಸೇರ್ಪಡೆ ನಡೆಸುತ್ತಿದೆ ಬಿಜೆಪಿ. ಪಕ್ಷದ ನಿಷ್ಠಾವಂತರನ್ನೇ ಮೂಲೆ ಗುಂಪು ಮಾಡಿದೆ ಬಿಜೆಪಿ. ಯಡಿಯೂರಪ್ಪನವರಿಗೆ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ಕೆ ಟಾಂಗ್ ನೀಡಿದ ಮಧು ಬಂಗಾರಪ್ಪ, ರಾಷ್ಟ್ರೀಯ ಪಕ್ಷಗಳ ರಾಜಕಾರಣಕ್ಕೆ ರಾಜ್ಯದ ಮತದಾರರು ಬೇಸತ್ತಿದ್ದಾರೆ. ರಾಜ್ಯ ಸರಕಾರದಲ್ಲಿರುವ ಸಾಕಷ್ಟು ಮುಖಂಡರನ್ನ ಜೆಡಿಎಸ್ ಪಕ್ಷ ನೀಡಿದೆ. 2018ರ ಚುನಾವಣೆಯಲ್ಲಿ ಜನರು ಪ್ರಾದೇಶಿಕ ಪಕ್ಷವನ್ನ ಬೆಂಬಲಿಸುವ ವಿಶ್ವಾಸವಿದೆ ಎಂದರು.
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಟೀಕೆ ಮಾಡ್ತಾರೆ. ಆದರೆ ಕಾಂಗ್ರೆಸ್ ಪಕ್ಷ ತಾಯಿ-ಮಗನ ಜೀತದಾಳಾಗಿ ದುಡಿಯುತ್ತಿದೆ ಎಂದು ಮಧು ಬಂಗಾರಪ್ಪ ಅಸಮಧಾನ ವ್ಯಕ್ತಪಡಿಸಿದರು.







