6 ನೇರ ಎಸೆತಗಳಲ್ಲಿ ಮಿಸ್ಬಾ 6 ಸಿಕ್ಸರ್...!
ಹಾಂಕಾಂಗ್ ಟ್ವೆಂಟಿ-20 ಬ್ಲಿಟ್ಝ್ 2017 ಟೂರ್ನಮೆಂಟ್‌ನಲ್ಲಿ ದಾಖಲೆ
.jpg)
ಹಾಂಕಾಂಗ್, ಮಾ.10: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ ವುಲ್ ಹಕ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವಂತೆ ಪಾಕಿಸ್ತಾನ ಕ್ರಿಕೆಟ್‌ಮಂಡಳಿ ಒತ್ತಡ ಎದುರಿಸುತ್ತಿರುವಾಗಲೇ ಸತತ ಆರು ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದಾರೆ.
ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸ್ಟುವರ್ಟ್ ಬ್ರಾಡ್‌ರ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್ ಬಾರಿಸಿರುವುದು ವಿಶ್ವ ದಾಖಲೆಯಾಗಿದೆ. ಆದರೆ ಮಿಸ್ಬಾ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿಲ್ಲ ಆದರೆ ಇಬ್ಬರು ಬೌಲರ್‌ಗಳ 2 ಓವರ್‌ಗಳ 6 ಎಸೆತಗಳಲ್ಲಿ ಸಿಕ್ಸರ್ ಮಳೆ ಸುರಿಸಿದ್ದಾರೆ.ಮಿಸ್ಬಾ ಆ ಮೂಲಕ ಯುವರಾಜ್ ಸಿಂಗ್ ದಾಖಲೆಯನ್ನು ನೆನಪಿಸಿದ್ದಾರೆ.
ಹಾಂಕಾಂಗ್ ಮಿಷನ್ ರೋಡ್ ಗ್ರೌಂಡ್‌ನಲ್ಲಿ ಗುರುವಾರ ರಾತ್ರಿ ನಡೆದ ಹಾಂಕಾಂಗ್ ಟ್ವೆಂಟಿ-20 ಬ್ಲಿಟ್ಝ್ 2017 ಟೂರ್ನಮೆಂಟ್‌ನ ಹಂಗ್ ಹಾಮ್ ಜೆಡಿ ಜಗ್ಸರ್ಸ್ ಮತ್ತು ಎಚ್‌ಕೆಐ ಯುನೈಟೆಡ್ ತಂಡಗಳ ನಡುವಿನ ಪಂದ್ಯದಲ್ಲಿ ಮಿಸ್ಬಾ ದಾಖಲೆ ಬರೆದಿದ್ದಾರೆ.
43ರ ಹರೆಯದ ಮಿಸ್ಬಾ ಈ ಪಂದ್ಯದಲ್ಲಿ ಔಟಾಗದೆ 82 ರನ್(37ಎ, 4ಬೌ, 7ಸಿ) ಗಳಿಸಿದರು ಈ ಪಂದ್ಯದಲ್ಲಿ ಮಿಸ್ಬಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಲ್ಲಿ ಅವರ ಎಚ್‌ಕೆ ಐ ಯುನೈಟೆಡ್ ತಂಡ ಎದುರಾಳಿ ಹಂಗ್ ಹಾಮ್ ವಿರುದ್ಧ 33 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಮಿಸ್ಬಾರ ಎಚ್‌ಕೆಐ ಯುನೈಟೆಡ್ ತಂಡ 18.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 6 ವಿಕೆಟ್ ನಷ್ಟದಲ್ಲಿ 175 ರನ್ ಗಳಿಸಿತ್ತು. ಎಚ್‌ಕೆ ಐ ಯುನೈಟೆಡ್ ತಂಡದ ನಾಯಕ ಮಿಸ್ಬಾ 42ರನ್(30ಎ) ಮತ್ತು ಸಯೀದ್ ಅಜ್ಮಲ್ 7ರನ್ (4ಎ) ಗಳಿಸಿ ಕ್ರೀಸ್‌ನಲ್ಲಿದ್ದರು. ಈ ಹಂತದಲ್ಲಿ ಮಿಸ್ಬಾ ಅವರು ಇಮ್ರಾನ್ ಆರೀಫ್‌ರ ಕೊನೆಯ ಎರಡು ಎಸೆತಗಳಲ್ಲಿ ಚೆಂಡನ್ನು ಸತತ ಎರಡು ಬಾರಿ ಸಿಕ್ಸರ್‌ಗೆ ಅಟ್ಟಿದರು. ಮಿಸ್ಬಾ ಸ್ಕೋರ್ 54(32ಎ)ಕ್ಕೆ ಮತ್ತು ಎಚ್‌ಕೆಐ ಯುನೈಟೆಡ್ ಸ್ಕೋರ್ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 187ಕ್ಕೆ ತಲುಪಿತು.
20ನೆ ಹಾಗೂ ಅಂತಿಮ ಓವರ್‌ನಲ್ಲಿ ಅಶ್ಲೆ ಕ್ಯಾಡಿ ಅವರ ಮೊದಲ ಎಸೆತದಲ್ಲಿ ಅಜ್ಮಲ್ 1 ರನ್ ಗಳಿಸಿ ಮಿಸ್ಬಾಗೆ ಬ್ಯಾಟಿಂಗ್‌ಗೆ ಅವಕಾಶ ಮಾಡಿಕೊಟ್ಟರು. ಮಿಸ್ಬಾ ಉಳಿದ ಐದು ಎಸೆತಗಳಲ್ಲಿ ಸತತ 4 ಸಿಕ್ಸರ್ ಮತ್ತು 1 ಬೌಂಡರಿ ಒಳಗೊಂಡ 28 ರನ್ ಕಬಳಿಸಿದರು. ಇದರೊಂದಿಗೆ ಹಾಂಕಾಂಗ್ ಐಲೆಂಡ್ ಯುನೈಟೆಡ್(ಎಚ್‌ಕೆಐಯು) ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿತು.
ಮಿಸ್ಬಾ ಔಟಾಗದೆ 82 ರನ್(37ಎ, 4ಬೌ,7ಸಿ) ಗಳಿಸಿದರು. ಗೆಲುವಿಗೆ 217 ರನ್‌ಗಳ ಸವಾಲು ಪಡೆದ ಹಂಗ್ ಹಾಮ್ ಜೆಡಿ ಜಗ್ಗರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 183 ರನ್ ಗಳಿಸಲಷ್ಟೇ ಶಕ್ತವಾಯಿತು.ಎಚ್‌ಕೆಐ ಯುನೈಟೆಡ್ 33 ರನ್‌ಗಳ ಜಯ ಗಳಿಸಿತು.
ಮಿಸ್ಬಾ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಪಾಕಿಸ್ತಾನ ತಂಡದ ಮೊದಲ ದಾಂಡಿಗನೆಂಬ ದಾಖಲೆ ಬರೆದರು.
ಪಾಕಿಸ್ತಾನ ಕ್ರಿಕೆಟ್ ತಂಡದ ಸಮಸ್ಯೆ: ಪಾಕಿಸ್ತಾನ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್, ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್ ವಿರುದ್ಧ ಸತತ ಸೋಲು ಅನುಭವಿಸಿದ ಕಾರಣಕ್ಕಾಗಿ ನಾಯಕ ಮಿಸ್ಬಾ ಕ್ರಿಕೆಟ್‌ನಿಂದ ನಿವೃತ್ತರಾಗಬೇಕು. ಅವರು ನಿವೃತ್ತರಾಗದಿದ್ದರೆ ನಾಯಕತ್ವದಿಂದ ಕೆಳಗಿಸಬೇಕೆಂಬ ಆಗ್ರಹ ಕೇಳಿ ಬಂದಿತ್ತು.ಆದರೆ ಮಿಸ್ಬಾ ತನ್ನ ಸಾಮರ್ಥ್ಯವನ್ನು ತೋರಿಸಿಕೊಡುವ ಮೂಲಕ ಟೀಕೆಕಾರರ ಬಾಯಿ ಮುಚ್ಚಿಸಿದ್ದಾರೆ.
‘‘ ನಾನು ಮಿಸ್ಬಾ ಅವರೊಂದಿಗೆ ಮಾತನಾಡಿ ಅವರ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದೇನೆ. ಭವಿಷ್ಯದ ಬಗ್ಗೆ ನಿರ್ಧರಿಸಬೇಕೆಂದು ಅವರಲ್ಲಿ ಹೇಳಿದ್ದೇನೆ. ಅವರು ಪಿಎಸ್‌ಎಲ್‌ನಲ್ಲಿ ಫಾರ್ಮ್ ಕಂಡುಕೊಂಡು ತನ್ನ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದರು. ಕಳೆದ ವಾರ ನನ್ನನ್ನು ಸಂಪರ್ಕಿಸಿ ತಂಡದ ಸೇವೆಗೆ ತಾನು ಲಭ್ಯ ಎಂದು ಹೇಳಿದ್ದರು. ಈ ಕಾರಣದಿಂದಾಗಿ ಅವರನ್ನು ತಂಡದ ನಾಯಕರಾಗಿ ಉಳಿಸಿಕೊಳ್ಳಲಾಗಿದೆ. ’’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದ್ದಾರೆ.
,,,,,,,,,,,,,







