ಉಡುಪಿ: ಸೇನೆಗೆ ಸೇರಲು ಜಿಲ್ಲೆಯ ಯುವಕರಿಗೆ ನಿರುತ್ಸಾಹ
ವಿಜಯಪುರದಲ್ಲಿ ಮೇ 12-18ಕ್ಕೆ ಸೇನಾ ನೇಮಕಾತಿ ರ‍್ಯಾಲಿ

ಉಡುಪಿ, ಮಾ.10: ಶಿಕ್ಷಣದಲ್ಲಿ ದೇಶದಲ್ಲೇ ಮುಂಚೂಣಿಯ ಜಿಲ್ಲೆಗಳಲ್ಲಿ ಒಂದಾಗಿರುವ ಉಡುಪಿ ಜಿಲ್ಲೆಯ ಯುವಕರು ಭಾರತೀಯ ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿ ಸೇವೆ ಸಲ್ಲಿಸಲು ತೀವ್ರ ನಿರುತ್ಸಾಹವನ್ನು ತೋರಿಸುತಿದ್ದಾರೆ ಎಂದು ಮಂಗಳೂರು ಸೇನಾ ನೇಮಕಾತಿ ಕಚೇರಿಯ ನೇಮಕಾತಿ ನಿರ್ದೇಶಕರಾಗಿರುವ ಕರ್ನಲ್ ಪ್ರಶಾಂತ್ ಪೇಟ್ಕರ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಸೇನೆಯ ಐದು ವಿಭಾಗಗಳ ಸೈನಿಕ ಹುದ್ದೆಗಳ ಭರ್ತಿಗಾಗಿ ಮೇ 12ರಿಂದ 18ರವರೆಗೆ ವಿನಯಪುರದ ಸೈನಿಕ ಶಾಲೆಯಲ್ಲಿ ನಡೆಯುವ ನೇಮಕಾತಿ ರ‍್ಯಾಲಿಗೆ ಪೂರ್ವಭಾವಿಯಾಗಿ ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯ ಕುರಿತಂತೆ ಜಿಲ್ಲೆಯ ಯುವಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಂತೆ ಈ ಗೋಷ್ಠಿಯನ್ನು ಕರೆಯಲಾಗಿತ್ತು.
ವಿಜಯಪುರ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಮಂಗಳೂರು ಸೇನಾ ನೇಮಕಾತಿ ಕಚೇರಿ ವ್ಯಾಪ್ತಿಯ 11 ಜಿಲ್ಲೆಗಳ -ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ್, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ- ಯುವಕರು ಭಾಗವಹಿಸ ಬಹುದಾಗಿದೆ ಎಂದವರು ವಿವರಿಸಿದರು.
ಪ್ರತಿ ವರ್ಷ ನಡೆಯುವ ಸೇನಾ ನೇಮಕಾತಿ ರ‍್ಯಾಲಿಯ ಕುರಿತಂತೆ ಉಡುಪಿ ಸೇರಿದಂತೆ ಕರಾವಳಿಯ ಯುವಕರು ತೀರಾ ನಿರಾಸಕ್ತಿಯನ್ನು ತೋರಿಸುತಿದ್ದಾರೆ. 2015ರಲ್ಲಿ ನಡೆದ ರ‍್ಯಾಲಿಯಲ್ಲಿ ಉಡುಪಿಯಿಂದ ಕೇವಲ 64 ಮಂದಿ ಸ್ಪರ್ಧಿಸಿದ್ದು, ಇವರಲ್ಲಿ ಕೇವಲ ಮೂವರು ಮಾತ್ರ ಆಯ್ಕೆಯಾಗಿದ್ದರು. 2016ರಲ್ಲಿ ಈ ಸಂಖ್ಯೆ 18ಕ್ಕೆ ಇಳಿದು ಅವರಲ್ಲಿ ಯಾರೊಬ್ಬರೂ ಸಹ ಅಂತಿಮವಾಗಿ ಆಯ್ಕೆಯಾಗಿರಲಿಲ್ಲ ಎಂದು ಕರ್ನಲ್ ಪ್ರಶಾಂತ್ ನುಡಿದರು.
ಇದಕ್ಕೆ ಸೈನ್ಯದ ನೇಮಕಾತಿಯ ಕುರಿತಂತೆ ಕರಾವಳಿಗರಿಗಿರುವ ಆಸಕ್ತಿಯ ಕೊರತೆಯೊಂದಿಗೆ ಅದರ ಬಗ್ಗೆ ಮಾಹಿತಿಯ ಕೊರತೆಯೂ ಕಾರಣವಾಗಿದೆ. ಸೈನ್ಯ ಸೇವೆಗೆ ಆಯ್ಕೆಯಾಗುವುದು ಗೌರವ ಹಾಗೂ ಪ್ರತಿಷ್ಠೆಯ ವಿಷಯವಾಗಿದ್ದು, ಇದರಿಂದ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸಿಗುವ ಭದ್ರತೆಯ ಕುರಿತಂತೆ ಇಲ್ಲಿನ ಹೆತ್ತವರಿಗೆ ಹಾಗೂ ಯುವಕರಿಗೆ ಅರಿವಿನ ಕೊರತೆ ಇದೆ. ಹೀಗಾಗಿ ಯುವಕರನ್ನು ಸೈನ್ಯದತ್ತ ಸೆಳೆಯಲು, ಆಕರ್ಷಿಸಲು ಜಿಲ್ಲಾಡಳಿತದ ನೆರವಿನೊಂದಿಗೆ ಪ್ರಯತ್ನಿಸುತ್ತಿರುವುದಾಗಿ ಹೇಳಿದರು.
ವಿಜಯಪುರದಲ್ಲಿ ಎಸ್ಸೆಸೆಲ್ಸಿ ತೇರ್ಗಡೆಗೊಂಡಿರುವ 17ರಿಂದ 21 ವರ್ಷದೊ ಳಗಿನ ಪ್ರಾಯದ ಯುವಕರಿಗಾಗಿ ಜನರಲ್ ಡ್ಯೂಟಿ ಸೈನಿಕರು ಹಾಗೂ ಟ್ರೇಡ್ಸ್‌ಮನ್ ಸೈನಿಕರು ಹುದ್ದೆಗೆ ಆಯ್ಕೆ ನಡೆಯಲಿದೆ. ಅದೇ ರೀತಿ 10+2 ಪಿಯುಸಿ ತೇರ್ಗಡೆಗೊಂಡಿರುವ 17ರಿಂದ 23 ವರ್ಷದೊಳಗಿನ ಪ್ರಾಯದ ಯುವಕರಿಗೆ ಟೆಕ್ನಿಕಲ್ ಸೋಲ್ಜರ್ಸ್, ಸೋಲ್ಜರ್ಸ್ ನರ್ಸಿಂಗ್ ಹಾಗೂ ಸೋಲ್ಜರ್ಸ್ ಕ್ಲರ್ಕ್-ಸ್ಟೋರ್‌ಕೀಪರ್ ಹುದ್ದೆಗೆ ಆಯ್ಕೆ ನಡೆಸಲಾಗುವುದು.
ಆಯ್ಕೆಗಾಗಿ ಎರಡು ಹಂತದ ಪರೀಕ್ಷೆಗಳು ನಡೆಯಲಿವೆ. ವಿಜಯಪುರದಲ್ಲಿ ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆಗಳು ನಡೆಯಲಿದ್ದು, ಬಳಿಕ ಲಿಖಿತ ಪರೀಕ್ಷೆಗಳು ಮಂಗಳೂರು ಕಚೇರಿಯಲ್ಲಿ ನಡೆಯಲಿದೆ.ಪ್ರತಿ ಹುದ್ದೆಗೂ ಅಭ್ಯರ್ಥಿಗೆ ಎತ್ತರ, ತೂಕ, ಎದೆಯ ಸುತ್ತಳತೆ, ಎಸ್ಸೆಸೆಲ್ಸಿ ಮತ್ತು ಪಿಯುಸಿಗಳಲ್ಲಿ ಪಡೆಯಬೇಕಾದ ಕನಿಷ್ಠ ಮಾರ್ಕುಗಳನ್ನು ನಿಗದಿ ಪಡಿಸಲಾಗಿದೆ. ಇವುಗಳ ಬಳಿಕ ದೈಹಿಕ ಸಾಮರ್ಥ್ಯ ಪರೀಕ್ಷೆ ಇದ್ದು, ಸ್ವಲ್ಪ ಪ್ರಯತ್ನಪಟ್ಟರೆ ಇವುಗಳಿಗೆ ನಿಗದಿ ಪಡಿಸಿದ ಅರ್ಹತಾ ಮಟ್ಟವನ್ನು ಸುಲಭವಾಗಿ ಮುಟ್ಟಬಹುದು.
ಸೈನ್ಯದ ಆಯ್ಕೆಗೆ ಹುದ್ದೆಗಳು ನಿಗದಿಯಾಗಿರುವುದಿಲ್ಲ. ಯಾರೆಲ್ಲ ಅರ್ಹತಾ ಪರೀಕ್ಷೆ, ಮಟ್ಟದಲ್ಲಿ ತೇರ್ಗಡೆಗೊಳ್ಳುತ್ತಾರೋ ಅವರೆಲ್ಲರನ್ನೂ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಜಿಲ್ಲೆಯ ಯುವಕರು ಸ್ವಲ್ಪ ಕಠಿಣ ಪರಿಶ್ರಮ ಪಟ್ಟು ಪ್ರಯತ್ನಿಸಿದರೆ, ಸೈನ್ಯಕ್ಕೆ ಸುಲಭವಾಗಿ ಆಯ್ಕೆಯಾಗಬಹುದು ಎಂದರು.
ರಾಜ್ಯದಿಂದ ಸೈನ್ಯಕ್ಕೆ ಆಯ್ಕೆಯಾಗುವವರಲ್ಲಿ ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಯುವಕರೇ ಶೇ.80ರಷ್ಟಿರುತ್ತಾರೆ. ಶಿವಮೊಗ್ಹ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದ ಯುವಕರು ಅನುಕ್ರಮವಾಗಿ ಕನಿಷ್ಠ ಆಸಕ್ತಿ ತೋರಿಸುತಿದ್ದಾರೆ. ಸೈನಿಕರಿಗೆ ನೀಡುವ ವೇತನ ಹಾಗೂ ಇತರ ಸೌಲಭ್ಯಗಳ ಕುರಿತಂತೆ ಇವರಿಗೆ ಮಾಹಿತಿಗಳ ಕೊರತೆ ಇದ್ದಂತಿದೆ.
ಒಬ ಸೈನಿಕ ಆಯ್ಕೆಯಾದ ತಕ್ಷಣ ತಿಂಗಳಿಗೆ 25,000ರೂ. ವೇತನ ಪಡೆಯುತ್ತಾನೆ.ಇದರೊಂದಿಗೆ ಆತನಿಗೆ ಉಚಿತ ಬಟ್ಟೆ, ಸಮವಸ್ತ್ರ, ರೇಷನ್, ವಸತಿ,ವೈದ್ಯಕೀಯ ಸೌಲಭ್ಯ, ಉಚಿತ ರೈಲ್ವೆ ಪ್ರಯಾಣ ಸೌಲಭ್ಯ,ಪ್ರತಿ ವರ್ಷ ಮೂರು ತಿಂಗಳ ರಜಾ ಸೌಲಭ್ಯವೂ ಸಿಗುತ್ತದೆ. ಪದವಿ ಪಡೆಯುವ ಅವಕಾಶ ದೊಂದಿಗೆ 15 ವರ್ಷಗಳ ಸತತ ಸೇವೆಯ ಬಳಿಕ ಸೈನ್ಯ ಬಿಟ್ಟು ಸರಕಾರಿ ಹುದ್ದೆಗಳನ್ನು ಪಡೆಯಲು ಅವಕಾಶವಿದೆ. ಅವರಿಗೆ ಜೀವನಪೂರ್ತಿ ಪಿಂಚಣಿ ಸಿಗುತ್ತದೆ. ಮಧ್ಯದಲ್ಲಿ ಸೈನಿಕ ಅಕಸ್ಮಿಕವಾಗಿ ಮರಣವನ್ನಪ್ಪಿದರೆ ಪತ್ನಿಗೆ ಜೀವನಪೂರ್ತಿ ಪಿಂಚಣಿ ಸಿಗುತ್ತದೆ ಎಂದರು.
ಅರ್ಜಿ ಸಲ್ಲಿಸಲು ಮಾಹಿತಿ:
ಸೈನ್ಯಕ್ಕೆ ಸೇರಲು ಆಸಕ್ತಿ ಇರುವ ಅವಿವಾಹಿತ ಯುವಕರು ಮಾ.12ರಿಂದ ಎಪ್ರಿಲ್ 25ರವರೆಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಒಬ್ಬ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಯಾವುದೇ ಮಧ್ಯವರ್ತಿಯನ್ನು ಆಶ್ರಯಿಸಬೇಡಿ ಎಂದು ಕರ್ನಲ್ ಪ್ರಶಾಂತ್ ಮನವಿ ಮಾಡಿದರು.
ಆಸಕ್ತರು ವೆಬ್‌ಸೈಟ್ - www.joinindianarmy.nic.in ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು. ಮೇ1ರಂದು ಅವರ ಪ್ರವೇಶಪತ್ರ ಆನ್‌ಲೈನ್‌ನಲ್ಲೇ ಲಭ್ಯವಿರಲಿದ್ದು, ಅದನ್ನು ಮುದ್ರಿಸಿಕೊಂಡು ಅದರಲ್ಲಿ ನಿಗದಿ ಪಡಿಸಿದ ದಿನ ಹಾಗೂ ಸಮಯಕ್ಕೆ ವಿಜಯಪುರದಲ್ಲಿ ಹಾಜರಿರಬೇಕು ಎಂದು ಡಾ.ಪ್ರಶಾಂತ್ ವಿವರಿಸಿದರು.
ಎಸ್‌ಸಿ/ಎಸ್‌ಟಿ ಯುವಕರಿಗೆ ತರಬೇತಿ:
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯ ಯುವಕರನ್ನು ಸೈನ್ಯಕ್ಕೆ ಸೇರುವಂತೆ ಉತ್ತೇಜಿಸಲು ಜಿಲ್ಲಾಡಳಿತ, ಈ ಬಗ್ಗೆ ಮಾಹಿತಿ ಶಿಬಿರಗಳನ್ನು ಆಯೋಜಿಸಲು ಕಾಲೇಜುಗಳಿಗೆ ಸೂಚಿಸಲಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 15 ದಿನಗಳ ಸಂಪೂರ್ಣ ಉಚಿತ ತರಬೇತಿಯನ್ನು ಎ.3ರಿಂದ ಆಯೋಜಿಸಲಾಗುವುದು ಎಂದರು.
ಇದಕ್ಕಾಗಿ ಆಸಕ್ತ ಎಸ್‌ಸಿ, ಎಸ್‌ಟಿ ಯುವಕರು ಬಿಇಓ ಕಚೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಅವರಿಗೆ ಸೈನ್ಯದ ಆಯ್ಕೆಗೆ ಬೇಕಾದ ಸಮಗ್ರ ಮಾಹಿತಿ, ಲಿಖಿತ ಪರೀಕ್ಷೆಗೆ ತರಬೇತಿ ಸಹ ನೀಡಲಾಗುತ್ತದೆ. ಅಲ್ಲದೇ ಸಂದರ್ಶನಕ್ಕಾಗಿ ವಿಜಯಪುರಕ್ಕೆ ತೆರಳಲು ಸಹ ಆರ್ಥಿಕ ನೆರವು ನೀಡಲಾ ಗುವುದು ಎಂದರು. ಉಳಿದ ಯುವಕರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.







