ಮಂಗಳೂರಿನಲ್ಲಿ 10 ರೂ. ನಾಣ್ಯ ಅನಧಿಕೃತ ನಿಷೇಧ: ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ದೂರು

ಮಂಗಳೂರು, ಮಾ.10: 10 ರೂ. ನಾಣ್ಯವನ್ನು ಜಿಲ್ಲೆಯಲ್ಲಿ ಅನಧಿಕೃತವಾಗಿ ನಿಷೇಧ ಹೇರಲಾಗಿದೆ. ಬಸ್, ಅಂಗಡಿ ಮುಂಗಟ್ಟಿನಲ್ಲಿ ಈ ನಾಣ್ಯವನ್ನು ಸ್ವೀಕರಿಸುತ್ತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದರು.
ಈ ಬಗ್ಗೆ ಯಾವುದೇ ಗೊಂದಲ ಬೇಡ. 10 ರೂ. ನಾಣ್ಯವನ್ನು ನಿಷೇಧಿಸಲಾಗಿಲ್ಲ. ಅದನ್ನು ಸ್ವೀಕರಿಸಲು ಯಾರಾದರೂ ನಿರಾಕರಿಸಿದರೆ ಪೊಲೀಸರಿಗೆ ದೂರು ನೀಡಬಹುದು ಎಂದು ಫೋನ್ ಕರೆಗಳನ್ನು ಸ್ವೀಕರಿಸಿದ ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದರು.
ಮಂಗಳೂರಿನಲ್ಲಿ ಮಲ್ಲಿಗೆ ಹೂವು ಮಾರಾಟದಲ್ಲಿ ವಂಚನೆ ಎಸಗಲಾಗುತ್ತಿದೆ. ಉಡುಪಿಯ ಕಟ್ಪಾಡಿ, ಕಾಪು ಕಡೆಯಿಂದ ಮಲ್ಲಿಗೆ ಹೂವುಗಳನ್ನು ತರಿಸಿ ಮಾಲೆಯ ಅಟ್ಟಿಯನ್ನು ತುಂಡರಿಸಿ ಉದ್ದ ಕಡಿತ ಮಾಡಿ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ಪೊಲೀಸರು ತಪಾಸಣೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರೊಬ್ಬರು ಆಗ್ರಹಿಸಿದರು.
ಮಂಗಳೂರಿನಲ್ಲಿ ಜ್ಯೋತಿಷಿಗಳ ಹಾವಳಿ ಹೆಚ್ಚಾಗಿದ್ದು, ಅಮಾಯಕರು ಮೋಸ ಹೋಗುತ್ತಿದ್ದಾರೆ ಎಂದು ಒಬ್ಬರು ದೂರು ಸಲ್ಲಿಸಿದರು. ಇಂತಹ ನಿರ್ಧಿಷ್ಟ ಪ್ರಕರಣಗಳಿದ್ದರೆ ಪೊಲೀಸರಿಗೆ ತಿಳಿಸಬಹುದು ಎಂದು ಡಿಸಿಪಿ ತಿಳಿಸಿದರು.
ಸುರತ್ಕಲ್‌ನಲ್ಲಿ ಕೆಲವು ಗ್ಯಾಸ್ ಏಜನ್ಸಿಯವರು ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವಾಗ ನಿಗದಿತ ದರಕ್ಕಿಂತ 25- 30 ರೂ. ಹೆಚ್ಚುವರಿಯಾಗಿ ಬಲವಂತವಾಗಿ ವಸೂಲು ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರಿದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಡಿಸಿಪಿ ಡಾ. ಸಂಜೀವ್ ಪಾಟೀಲ್ ಸಲಹೆ ಮಾಡಿದರು.
ಕದ್ರಿ-ಮಲ್ಲಿಕಟ್ಟೆ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್‌ಗೆ ಸರಕಾರಿ ಬಸ್ ಆರಂಭಿಸಬೇಕು, ನಗರದ ಮಿನಿ ವಿಧಾನ ಸೌಧದ ಮುಂದಿನ ರಸ್ತೆಯಲ್ಲಿ ರ್ಲಿೆಕ್ಟಿವ್ ಕೋನ್ಸ್‌ಗಳನ್ನು ಸುವ್ಯವಸ್ಥೆಗೊಳಿಸಬೇಕು, ಪೋನ್ ಇನ್ ಕಾರ್ಯಕ್ರಮಕ್ಕೆ ಮನಪಾ ಅಧಿಕಾರಿಗಳನ್ನೂ ಕರೆಸಬೇಕು, ಮಂಜನಾಡಿ-ಮುಡಿಪು ಮಾರ್ಗದಲ್ಲಿ ಸಂಚರಿಸುವ ಕೆಲವು ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡಿಸಬೇಕು, ವಾಸ್‌ಲೇನ್‌ನಲ್ಲಿ ಮನೆಯೊಂದರ ಗೇಟ್ ಎದುರು ರಸ್ತೆಯಲ್ಲಿ ಖಾಯಂ ಆಗಿ ಕಾರು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆಯೂ ದೂರುಗಳು ಬಂದವು.
ಮೋರ್ಗನ್ಸ್‌ಗೇಟ್‌ನಲ್ಲಿ ಸೆಟ್‌ಬ್ಯಾಕ್ ಜಾಗ ಬಿಡದೆ ಕಟ್ಟಡ ಕಟ್ಟಿಸಲಾಗಿದ್ದು, ಈ ಬಗ್ಗೆ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವ್ಯಕ್ತಿಯೊಬ್ಬರು ದೂರಿದರು.
ಪುಟ್‌ಪಾತ್‌ನಲ್ಲಿ ಭಿಕ್ಷುಕರ ಮತ್ತು ಅಲೆಮಾರಿಗಳ ಹಾವಳಿ ಹೆಚ್ಚುತ್ತಿವೆ, ಬಾವುಟಗುಡ್ಡೆಯಲ್ಲಿ ರಸ್ತೆ ದಾಟಲು ಝೀಬ್ರಾ ಕ್ರಾಸ್ ಬೇಕು ಎಂಬ ಮನವಿಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮನಪಾಕ್ಕೆ ಮಾಹಿತಿ ನೀಡಲಾಗುವುದು ಎಂದರು.
ಪ್ರಾಪರ್ಟಿ ಕಾರ್ಡ್ ವಿತರಣೆಯಲ್ಲಿ ವಿಳಂಬಿಸಲಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಡಿಸಿಪಿ ಡಾ. ಸಂಜೀವ್ ಪಾಟೀಲ್ ಈ ಬಗ್ಗೆ ಮನವಿ ಸಲ್ಲಿಸಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರಿಗೂ ದೂರು ನೀಡಿಡಬಹುದು ಎಂದರು.
ಮುಕ್ಕ ಬಸ್ ತಂಗುದಾಣದಲ್ಲಿ ಕೆಲವು ಖಾಸಗಿ ಎಕ್ಸ್‌ಪ್ರೆಸ್ ಬಸ್ಸುಗಳು ವಿದ್ಯಾರ್ಥಿಗಳಿದ್ದರೆ ಮಾತ್ರ ಹತ್ತಿಸಿಕೊಳ್ಳುತ್ತಿದ್ದು, ಇತರ ಸಾರ್ವಜನಿಕರಿದ್ದರೆ ಬಸ್ ನಿಲ್ಲಿಸುತ್ತಿಲ್ಲ. ಬಸ್ಸಿನಿಂದ ಇಳಿಯುವ ಪ್ರಯಾಣಿಕರಿದ್ದರೆ ಅದಕ್ಕೂ ಅವಕಾಶ ಕೊಡುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಅಹವಾಲು ಸಲ್ಲಿಸಿದರು.
ಎಸಿಪಿಗಳಾದ ತಿಲಕ್‌ಚಂದ್ರ ಮತ್ತು ವೆಲೆಂಟೈನ್ ಡಿಸೋಜಾ, ಇನ್‌ಸ್ಪೆಕ್ಟರ್ ರಫೀಕ್, ಎಎಸ್ಸೈ ಯೂಸ್ು, ಸಿಬಂದಿ ಪುರುಷೋತ್ತಮ ಉಪಸ್ಥಿತರಿದ್ದರು.







