" 3 ರೂ.ನ ತೊಂಡೆಕಾಯಿಗಾಗಿ 30 ರೂ. ನೀಡುವಂತಾಯಿತು "
ಪುತ್ತೂರು: ಕಿಲ್ಲೆ ಮೈದಾನದಲ್ಲಿ ಸೋಮವಾರ ಸಂತೆ ನಡೆಸಲು ನಗರಸಭೆ ತೀರ್ಮಾನ

ಪುತ್ತೂರು, ಮಾ.10: ವ್ಯಾಪಾರಸ್ಥರ ನಷ್ಟವನ್ನು ಪರಿಗಣಿಸಿ ಪುತ್ತೂರಿನ ವಾರದ ಸಂತೆಯನ್ನು ಮರಳಿ ಕಿಲ್ಲೆ ಮೈದಾನದಲ್ಲಿ ಸೋಮವಾರವೇ ನಡೆಸಲು ಪುತ್ತೂರು ನಗರಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.
ಅಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿ ಪುತ್ತೂರು ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆ ನಿರ್ಣಯಿಸಿತು.
ಸದಸ್ಯ ರಮೇಶ್ ರೈ ಮಾತನಾಡಿ, ಸಂತೆಯನ್ನು ಮತ್ತೆ ಸೋಮವಾರವೇ ನಡೆಸುತ್ತಿರುವುದು ಉತ್ತಮ ವಿಚಾರ. ಆದರೆ ಇದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂಬಂತಹ ಮಾತು ಕೇಳಿ ಆಶ್ಚರ್ಯವಾಯಿತು ಎಂದರು.
ಆಡಳಿತ ಪಕ್ಷದ ಪರವಾಗಿ ಮಾತನಾಡಿದ ಸದಸ್ಯ ಮುಹಮ್ಮದ ಅಲಿ, ಪುತ್ತೂರಿನ ಸಂತೆ ಗ್ರಾಹಕರಿಗಾಗಿಯೇ ನಡೆಸಲಾಗುತ್ತಿದೆ. ಆದರೆ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದಾಗಲೀ, ಅಥವಾ ರವಿವಾರ ನಡೆಸುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಗ್ರಾಹಕರಿಗೇ ಬೇಡ ಎಂದ ಮೇಲೆ, ಪುತ್ತೂರಿನ ಸಂತೆ ಯಾರಿಗಾಗಿ ನಡೆಸುವುದು? ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರಸ್ಥರಿಗೆ ಮಾತ್ರ ಸಂತೆ ಎಂಬಂತಾಗಿದೆ. ವಿಪಕ್ಷದವರು ಸೋಮವಾರವೇ ನಡೆಸುವಂತೆ ಆಗ್ರಹಿಸುವುದು ಸಹಜ. ಆದರೆ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಸರ್ವಾನುಮತದ ತೀರ್ಮಾನ ಕೈಗೊಂಡ ಬಳಿಕವಷ್ಟೇ ಸಂತೆಯನ್ನು ಸೋಮವಾರ ಕಿಲ್ಲೆ ಮೈದಾನದಲ್ಲಿ ನಡೆಸಲು ಸಾಧ್ಯ. ಇಂದಿನ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದೆ. ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.
ಸದಸ್ಯ ಸುಜೀಂದ್ರ ಪ್ರಭು ಮಾತನಾಡಿ, ಇದನ್ನು ಹಿಂದೆಯೇ ಮಾಡಬೇಕಿತ್ತು. 3 ರೂ.ನ ತೊಂಡೆಕಾಯಿಗಾಗಿ 30 ರೂ. ನೀಡುವಂತಾಯಿತು. ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈಗಲಾದರೂ ಉತ್ತಮ ನಿರ್ಧಾರ ಕೈಗೊಂಡದ್ದಕ್ಕೆ ಅಭಿನಂದನೆ ಎಂದರು.
ಸದಸ್ಯ ರಾಜೇಶ್ ಬನ್ನೂರು ಮಾತನಾಡಿ, ಸಂತೆಯ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಂಡು ಬಳಿಕ ಸ್ಥಳಾಂತರದ ನಿರ್ಣಯ ಕೈಗೊಳ್ಳಬೇಕಿತ್ತು. ಆದರೆ ಏಕಾಏಕೀ ತೀರ್ಮಾನ ಕೈಗೊಂಡ ಕಾರಣ ಹಲವು ಸಮಸ್ಯೆ ಎದುರಿಸಬೇಕಾಯಿತು. ರೈನುಕೋಟ್ ತೆಗೆದು ಸ್ನಾನ ಮಾಡುವ ಕೆಲಸವನ್ನು ನಗರಸಭೆ ಈಗ ಮಾಡುತ್ತಿದೆ. ಇರುವ ಸೀರೆಯನ್ನು ಸುಟ್ಟು, ಖರೀದಿಸಿ ತರಬೇಕಾದ ಸೀರೆಯನ್ನು ತವಕಿಸಿದಂತಾಗಿದೆ. ಹೊಸ ಸೀರೆ ಇಲ್ಲದೇ ಶಾಲು ಹೊದ್ದು ಮಲಗುವ ಸ್ಥಿತಿ ಬಂದ ಘಟನೆಯನ್ನು ನೆನಪಿಸಿಕೊಂಡರು. ಒಟ್ಟಿನಲ್ಲಿ ಪರಿಸ್ಥಿತಿ ಈ ಎರಡೂ ನಿದರ್ಶನದಂತೆ ವೇದ್ಯವಾಗಿದೆ ಎಂದು ಗಮನ ಸೆಳೆದರು.
ಹೋರಾಟ ನಡೆಸಿದವರು ಎಲ್ಲಾ ಸವಾಲನ್ನು ಎದುರಿಸುವುದು ಸಹಜ. ಆದರೆ ಹೋರಾಟ ಮಾಡದೇ ಜೈಲಿಗೆ ಹೋಗಲು ಸಿದ್ಧ ಎನ್ನುವುದರಲ್ಲಿ ಹುರುಳಿಲ್ಲ. ನಮಗಾಗಿ ಜೈಲಿಗೆ ಹೋಗುವುದೂ ಬೇಡ. ನಗರಸಭೆಯ ಆಡಳಿತವನ್ನು ಬಿಟ್ಟು ಉಳಿದವರೆಲ್ಲರೂ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸಂತೆಯನ್ನು ಮತ್ತೆ ಸೋಮವಾರ ನಡೆಸುವ ವಿಚಾರ ಉತ್ತಮ. ಇದಕ್ಕಾಗಿ ಅಭಿನಂದನೆ ಸೂಚಿಸಿದರು.
ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತು ಮುಂದುವರಿಯುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸದಸ್ಯೆ ಜೋಹರಾ ಅಹಮದ್, ಒಬ್ಬ ಅಧಿಕಾರಿಗೆ ತೊಂದರೆ ಆಗುತ್ತದೆ ಎಂದು ಸಂತೆಯನ್ನು ಸ್ಥಳಾಂತರ ಮಾಡಲಾಗಿತ್ತು. ಅನೇಕ ಗ್ರಾಹಕರಿಗೆ ಬರುವ ಅವಕಾಶ ಮಾಡಿಕೊಡುವ ಕಡೆ ಗಮನವೇ ನೀಡಿಲ್ಲ. ಇದೀಗ ಎಲ್ಲರೂ ಅಹಂಕಾರ, ಪ್ರತಿಷ್ಠೆ ಬಿಟ್ಟು ಉತ್ತಮ ನಿರ್ಧಾರ ಕೈಗೊಂಡಿದ್ದೀರಿ. ಮುಂದೆ ಚರ್ಚೆಗೆ ಅವಕಾಶ ನೀಡುವುದು ಬೇಡ ಎಂದು ಹೇಳಿದರು.







