ಬುದ್ದಿವಂತಿಕೆಯಲ್ಲಿ ಭಾರತೀಯರಿಗೆ ವಿಶ್ವದಲ್ಲಿಯೇ ಅಗ್ರ ಪಂಕ್ತಿಯ ಸ್ಥಾನವಿದೆ: ಕೇಶವ ಭಟ್

ಪುತ್ತೂರು, ಮಾ.10: ಬುದ್ದಿವಂತಿಕೆಯಲ್ಲಿ ಭಾರತೀಯರಿಗೆ ವಿಶ್ವದಲ್ಲಿಯೇ ಅಗ್ರ ಪಂಕ್ತಿಯ ಸ್ಥಾನ ಮಾನವಿದೆ. ಗೂಗಲ್ ಮತ್ತು ಮೈಕ್ರೊಸೋಫ್ಟ್ ಸಂಸ್ಥೆಗಳ ಮುಖ್ಯಸ್ಥರು ಭಾರತೀಯರೇ ಆಗಿರುವುದು ಹೆಮ್ಮೆಯ ಸಂಗತಿ. ನಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಧರ್ಮನಿಷ್ಠೆಯನ್ನು ಅಳವಡಿಸಿಕೊಂಡಾಗ ಯಶಸ್ಸನ್ನು ಗಳಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ನ ವಕೀಲರಾದ ಎ. ಕೇಶವ ಭಟ್ ಹೇಳಿದರು.
ಅವರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಗಣದಲ್ಲಿ ಗುರುವಾರ ಆಯೋಜಿಸಲಾದ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ನಾವು ಶಿಕ್ಷಣವನ್ನು ಪಡೆದಕೊಂಡ ಸಂಸ್ಥೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸಿಗುವ ಅಭಿಮಾನದ ಕ್ಷಣಗಳು ಬೇರೆ ಯಾವುದೇ ಸಂದರ್ಭದಲ್ಲಿ ಸಿಗಲಾರದು. ಮಾನವನ ಜೀವನದ ವಿವಿಧ ಹಂತಗಳಲ್ಲಿ ವಿದ್ಯಾರ್ಥಿ ಜೀವನವೇ ಅತ್ಯಂತ ಶ್ರೇಷ್ಠವಾದುದು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಗುರುವಿಗೆ ಅತ್ಯುನ್ನತ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾಲೇಜಿನ ಸಂಚಾಲಕರಾದ ಅತಿ ವಂ. ಆಲ್ಫ್ರೆಡ್ ಜೆ. ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರು ಮತ್ತು ಕ್ಯಾಂಪಸ್ ನಿರ್ದೇಶಕರಾಗಿರುವ ರೆ ಡಾ ಆ್ಯಂಟನಿ ಪ್ರಕಾಶ್ ಮೊಂತೆರೊ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರೆ. ಫಾ. ವಿಜಯ್ ಲೋಬೊ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೈಕೋರ್ಟು ವಕೀಲ ಎ. ಕೇಶವ ಭಟ್, ವಿಜಯಾ ಬ್ಯಾಂಕ್‌ನ ನಿವೃತ್ತ ಎಜಿಮ್ ಗ್ರೆಗೊರಿ ಲೋಬೊ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ವಿದುಷಿ ನಯನಾ ವಿ ರೈ ಮತ್ತು ಪುತ್ತೂರು ಉಪವಿಭಾಗದ ಪೊಲೀಸ್ ಡಿವೈಎಸ್‌ಪಿ ಭಾಸ್ಕರ್ ರೈ ಎನ್ ಇವರನ್ನು ಸನ್ಮಾನಿಸಲಾಯಿತು. ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ವಿಶೇಷ ಸಾಧನೆಗೈದ, ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಎನ್‌ಸಿಸಿ ಮುಂತಾದವುಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಸಹ ಗೌರವಿಸಲಾಯಿತು ಹಾಗೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದವರಿಗೆ ವಂ. ಹೆನ್ರಿ ಕ್ಯಾಸ್ಟೆಲಿನೊ ಸ್ಮಾರಕ ದತ್ತಿ ನಿಧಿಯನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಎಮ್ ಆರ್ ಜಯಕುಮಾರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಭರತ್ ಕುಮಾರ್ ಎ ವಾರ್ಷಿಕ ವರದಿಯನ್ನು ಮಂಡಿಸಿದರು. ಜೊತೆ ಕಾರ್ಯದರ್ಶಿ ಶಕುಂತಳಾ ವಂದಿಸಿದರು. ಹಿರಿಯ ವಿದ್ಯಾರ್ಥಿಗಳಾದ ಸುರೇಶ್ ಶೆಟ್ಟಿ ಮತ್ತು ಪ್ರತಿಮಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಉಪನ್ಯಾಸಕ ಪ್ರಶಾಂತ್ ರೈ ಸಂಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು.







