ಅಮೆರಿಕಾ : ಮುಸ್ಲಿಮ್ ನಿಷೇಧವನ್ನು ಪ್ರಶ್ನಿಸಲು ಇನ್ನಷ್ಟು ರಾಜ್ಯಗಳು ಮುಂದು

ವಾಶಿಂಗ್ಟನ್, ಮಾ. 10: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪರಿಷ್ಕೃತ ಆದೇಶವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದಾಗಿ ಅಮೆರಿಕದ ಹಲವಾರು ರಾಜ್ಯಗಳು ಗುರುವಾರ ಹೇಳಿವೆ.
ನೂತನ ಪ್ರಯಾಣ ನಿಷೇಧ ಆದೇಶವು ಜನವರಿ 27ರಂದು ಜಾರಿಗೆ ಬಂದ ಕಠಿಣ ಆದೇಶದ ಜಾಗದಲ್ಲಿ ಮಾರ್ಚ್ 16ರಂದು ಜಾರಿಗೆ ಬರಲಿದೆ.
ಮೊದಲ ಆದೇಶವನ್ನು ವಾಶಿಂಗ್ಟನ್ ಮತ್ತು ಮಿನಸೋಟ ರಾಜ್ಯಗಳು ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದವು. ಅದರ ವಿರುದ್ಧ ಇತರ ಎರಡು ಡಝನ್ ಮೊಕದ್ದಮೆಗಳೂ ದಾಖಲಾಗಿದ್ದವು.
ವಾಶಿಂಗ್ಟನ್ ರಾಜ್ಯದ ಮೊಕದ್ದಮೆಯ ವಿಚಾರಣೆ ನಡೆಸಿದ ಸಿಯಾಟಲ್‌ನ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ರೋಬರ್ಟ್, ಆದೇಶಕ್ಕೆ ತುರ್ತು ತಡೆಯಾಜ್ಞೆ ನೀಡಿದ್ದರು. ಬಳಿಕ ಸ್ಯಾನ್‌ಫ್ರಾನ್ಸಿಸ್ಕೊದ ಉನ್ನತ ನ್ಯಾಯಾಲಯವೊಂದು ತಡೆಯಾಜ್ಞೆಯನ್ನು ಎತ್ತಿಹಿಡಿದಿತ್ತು.
ಟ್ರಂಪ್‌ರ ಪರಿಷ್ಕೃತ ಆದೇಶಕ್ಕೂ ತನ್ನ ಮೂಲ ತೀರ್ಪು ಅನ್ವಯವಾಗುತ್ತದೆ ಎಂಬುದಾಗಿ ಘೋಷಿಸುವಂತೆ ನ್ಯಾಯಾಧೀಶ ರೋಬರ್ಟ್‌ಗೆ ಮನವಿ ಮಾಡುವುದಾಗಿ ವಾಶಿಂಗ್ಟನ್ ರಾಜ್ಯದ ಅಟಾರ್ನಿ ಜನರಲ್ ರಾಬರ್ಟ್ ಫರ್ಗ್ಯೂಸನ್ ಗುರುವಾರ ಹೇಳಿದ್ದಾರೆ.
ಕಳೆದ ತಿಂಗಳ ನ್ಯಾಯಾಲಯದ ತೀರ್ಪು ತನ್ನ ನೂತನ ಆದೇಶಕ್ಕೆ ಅನ್ವಯಿಸುವುದಿಲ್ಲ ಎನ್ನುವುದನ್ನು ಸಾಧಿಸುವ ಹೊಣೆ ಟ್ರಂಪ್ ಆಡಳಿತದ ಮೇಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಫರ್ಗ್ಯೂಸನ್ ಅಭ್ಪಿಪ್ರಾಯಪಟ್ಟರು.
ನ್ಯೂಯಾರ್ಕ್ ಮತ್ತು ಒರೆಗಾನ್ ರಾಜ್ಯಗಳ ಅಟಾರ್ನಿ ಜನರಲ್‌ಗಳೂ ಮೊಕದ್ದಮೆಯಲ್ಲಿ ವಾಶಿಂಗ್ಟನ್ ಜೊತೆ ಕೈಜೋಡಿಸುವುದಾಗಿ ಹೇಳಿದ್ದಾರೆ. ಅದೇ ವೇಳೆ, ಮ್ಯಾಸಚುಸೆಟ್ಸ್ ಮತ್ತು ಮಿನಸೋಟ ರಾಜ್ಯಗಳ ಅಟಾರ್ನಿ ಜನರಲ್‌ಗಳೂ ಟ್ರಂಪ್ ಮುಸ್ಲಿಮ್ ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.







