ಇ-ಸ್ಟಾಂಪಿಂಗ್: ಪ್ರತಿನಿತ್ಯ 1 ಕೋಟಿ ರೂ. ಸಂಗ್ರಹ
ಶಿವಮೊಗ್ಗ, ಮಾ. 10: ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಇ-ಸ್ಟಾಂಪಿಂಗ್ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರದ ಮೂಲಕ ಜಾರಿಗೊಳಿಸಿ ಸಾಧನೆಗೈದ ರಾಜ್ಯ ಕರ್ನಾಟಕವಾಗಿದ್ದು, ಇ-ಸ್ಟಾಂಪಿಂಗ್ ಮೂಲಕ ಪ್ರತಿನಿತ್ಯ ಸುಮಾರು 1 ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿದೆ ಎಂದು ಸಹಕಾರಿ ಸಂಘಗಳ ಜಿಲ್ಲಾ ಉಪನಿಬಂಧಕ ಎ.ಎಸ್.ಜಯಪ್ಪ ಹೇಳಿದ್ದಾರೆ.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘಗಳ ಬೆಂಗಳೂರು ವಿಭಾಗದಿಂದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಹಕಾರಿಗಳಿಗೆ ಆಯೋಜಿಸಲಾಗಿದ್ದ ಇ-ಸ್ಟಾಂಪಿಂಗ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ಹಕಾರಿ ಸೌಹಾರ್ದವು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಇ-ಸ್ಟಾಂಪಿಂಗ್ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ರಾಜ್ಯ ಸರಕಾರದ ಎಲ್ಲ್ಲ ಸೇವಾ ಸೌಲಭ್ಯವನ್ನು ನಿರ್ವಹಿಸುವ ಮಹತ್ತರ ಕೆಲಸ ಇದಾಗಿದೆ. ಸಾರ್ವಜನಿಕರಿಗೆ ಸೇವೆ ಮಾಡಲು ಹಾಗೂ ಬಡ್ಡಿಯೇರ ಆದಾಯ ಹೆಚ್ಚಿಕೊಳ್ಳಲು ಇದೊಂದು ಉತ್ತಮ ಮೂಲವಾಗಿದೆ ಎಂದರು.
ಸೌಹಾರ್ದ ಸಹಕಾರಿಗಳು ಛಾಪಕಾಗದಗಳನ್ನು ಇಲೆಕ್ಟ್ರಾನಿಕ್ ಯಂತ್ರಗಳ ಮೂಲಕ ಸಾರ್ವಜನಿಕರಿಗೆ ನೀಡುವ ಈ ಮಹತ್ತರ ಕಾರ್ಯ ದೇಶದಲ್ಲೇ ಹೆಸರು ವಾಸಿಯಾಗಿದೆ. ಕರ್ನಾಟಕದಲ್ಲಿ ಸುಮಾರು 155 ತಾಲೂಕಿನ 398 ಸ್ಥಳಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಬೆಂಗಳೂರಿನ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕಿ ಆರ್. ಶೋಭಾ ಮಾತನಾಡಿ, 2015-16ರ ಸಾಲಿನಲ್ಲಿ ರಾಜ್ಯಕ್ಕೆ 265.93 ಕೋಟಿ ರಾಜ್ಯಸ್ವವನ್ನು ಸಂಗ್ರಹಿಸಿಕೊಟ್ಟಿದೆ. ಸಾರ್ವಜನಿಕರಿಗೆ ಅಗತ್ಯವಿರುವ ಇನ್ನೂ ಅನೇಕ ಯೋಜನೆಗಳನ್ನು ಇ-ಗೌವರ್ನನ್ಸ್, ಕಾಮನ್ ಫೆಸಿಲಿಟಿ ಸೆಂಟರ್ ಹಾಗೂ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳನ್ನು ಸಹಕಾರ ಕ್ಷೇತ್ರದ ಮೂಲಕವೇ ಮಾಡುವ ಚಿಂತನೆ ಸರಕಾರದ ಮುಂದಿದೆ ಎಂದರು.
ಸಮಾರಂಭದಲ್ಲಿ ಇ-ಸ್ಟಾಂಪಿಂಗ್ ಮಾರ್ಗದರ್ಶಿ ಕೈಪಿಡಿಯನ್ನು ಹಿರಿಯ ಉಪಸಂಪಾದಕ ಚಂದ್ರಹಾಸ್ ಹಿರೇಮಳಲಿ ಬಿಡುಗಡೆಗೊಳಿಸಿದರು. ಅತಿಥಿಗಳಾಗಿ ಜಿಲ್ಲಾ ನೋಂದಣಾಧಿಕಾರಿ ಹೇಮಗಿರಿ, ಸ್ಟಾಕ್ ಹೋಲ್ಡಿಂಗ್ ಲಿಮಿಟೆಡ್‌ನ ಅಧಿಕಾರಿ ಭುಜಂಗೇಶ್ ಕಾಮತ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಹಕಾರಿ ಸೌಹಾರ್ದದ ಜಿಲ್ಲಾ ನಿರ್ದೇಶಕ ಎಚ್.ವಿ. ರವಿಕುಮಾರ್ ವಹಿಸಿದ್ದರು. ಸಹಕಾರಿ ಸೌಹಾರ್ದದ ವಿಭಾಗಾಧಿಕಾರಿ ಆರ್. ಸೂರ್ಯಕಾಂತ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ 4 ಜಿಲ್ಲೆಗಳ ಸುಮಾರು 100 ಕ್ಕೂ ಹೆಚ್ಚು ಇ-ಸ್ಟಾಂಪಿಂಗ್ ಸೇವೆ ನೀಡುವ ಕೇಂದ್ರದ ನೌಕರರು ಪಾಲ್ಗೊಂಡಿದ್ದರು.







