ಪಿಎಸ್ಸೈ ಮೇಲೆ ಹಲ್ಲೆ ಪ್ರಕರಣ: ಶಿಕ್ಷೆ ರದ್ದುಗೊಳಿಸಿದ ಸುಪ್ರೀಂಕೋರ್ಟ್
ಮೂಡಿಗೆರೆ, ಮಾ.10: ತಾಲೂಕಿನ ಕಿರುಗುಂದ ಗ್ರಾಪಂ ವ್ಯಾಪ್ತಿಯ ಚಕ್ಕುಡಿಗೆ ಗ್ರಾಮದಲ್ಲಿ 1988ರ ಜೂ.26ರಂದು ನಡೆದ ಮೂಡಿಗೆರೆ ಪಿಎಸ್ಸೈ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಆರೋಪಿಯೋರ್ವನಿಗೆ ಜಿಲ್ಲಾ ಸೆಷನ್ ನ್ಯಾಯಾಲಯ ನೀಡಿದ್ದ 3ವರ್ಷಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
1988ರ ಜೂ.26ರಂದು ಮೂಡಿಗೆರೆ ಪೊಲೀಸ್ ಠಾಣೆಯ ಪಿಎಸ್ಸೈ ಆರ್.ಲಕ್ಷ್ಮಣ್ ಅವರು ಕಳ್ಳತನ ಪ್ರಕರಣದ ಸಂಬಂಧ ಚಕ್ಕುಡಿಗೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಂಜುಗೋಡನಹಳ್ಳಿ ಗ್ರಾಮದ ಎಚ್.ಎಂ. ವಿಕ್ರಂ ಎಂಬವರೊಂದಿಗೆ ವಾಗ್ವಾದ ನಡೆದು ಸುಮಾರು 35 ಮಂದಿಯ ತಂಡ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಈ ಸಂಬಂಧ ಹಲ್ಲೆಯಲ್ಲಿ ವಿಕ್ರಂ ಸಹಿತ ಹುರುಡಿ, ಚಕ್ಕುಡಿಗೆ, ಹೆಗ್ಗರವಳ್ಳಿ, ಕೊರಡಿ ಗ್ರಾಮಗಳ ಸುಮಾರು 35 ಮಂದಿ ಆರೋಪಿಗಳನ್ನು ಗುರುತಿಸಿದ ಪೊಲೀಸರು ಮೂಡಿಗೆರೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಚಿಕ್ಕಮಗಳೂರು ಜಿಲ್ಲಾ ಸೆಷನ್ ನ್ಯಾಯಾಲಯವು 2001ರಲ್ಲಿ ಆರೋಪಿಗಳಲ್ಲಿ ಎಚ್.ಎಂ.ವಿಕ್ರಂ ತಪ್ಪಿತಸ್ಥರೆಂದು ಆದೇಶಿಸಿ ಮೂರು ವರ್ಷ ಕಾರಾಗೃಹ ವಾಸ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತ್ತು. ಮತ್ತು ಉಳಿದ 34 ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತ್ತು. ಜಾಮೀನು ಪಡೆಯಲು ವಿಕ್ರಂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ 2008ರಲ್ಲಿ ವಿಕ್ರಂ ಅವರ ಮೇಲಿನ ಆಪಾದನೆಯ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ವಿಕ್ರಂ ಸುಪ್ರಿಂ ಕೋರ್ಟ್ ನಿಂದ ಜಾಮೀನು ಪಡೆದು ಹೈಕೋರ್ಟ್‌ನ ತೀರ್ಪಿನಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2017ರ ಮಾ.9ರಂದು ಆರೋಪಿ ಹಂಜುಗೋಡನಹಳ್ಳಿಯ ಎಚ್.ಎಂ.ವಿಕ್ರಂಗೆ ಶಿಕ್ಷೆಯನ್ನು ಕಾಯಂಗೊಳಿಸಲು ಸಾಕ್ಷ್ಯಾದಾರಗಳ ಕೊರತೆಗಳಿವೆ ಎಂದು ಅಧೀನ ನ್ಯಾಯಾಲಯ ವಿಧಿಸಿದ್ದ 3 ವರ್ಷಗಳ ಕಾರಾಗೃಹ ವಾಸದ ಶಿಕ್ಷೆಯನ್ನು ರದ್ದುಪಡಿಸಿ ತೀರ್ಪು ಪ್ರಕಟಿಸಿದೆ.







