ವಿಜಯ ಮಲ್ಯಗೆ ಹೈಕೋರ್ಟ್ ವಾರಂಟ್
ಬೆಂಗಳೂರು, ಮಾ.10: ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ 9 ಸಾವಿರ ಕೋಟಿ ರೂ.ಸಾಲದ ವಿಚಾರಕ್ಕೆ ಸಂಬಂಧಪಟ್ಟಂತೆ ಉದ್ಯಮಿ ವಿಜಯ ಮಲ್ಯಗೆ ಹೈಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿ ಆದೇಶಿಸಿದೆ.
ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಉದ್ಯಮಿ ವಿಜಯ ಮಲ್ಯಗೆ ಜಾಮೀನು ಸಹಿತ ವಾರಂಟ್ ಜಾರಿ ಮಾಡಿರುವ ಹೈಕೋರ್ಟ್ 50 ಲಕ್ಷ ರೂ.ಬಾಂಡ್ ನೀಡಬೇಕು, ಜೂನ್ 1ರ ಒಳಗೆ ಭಾರತಕ್ಕೆ ಬರಬೇಕೆಂದು ಆದೇಶಿಸಿದೆ. ಅರ್ಜಿದಾರರ ಪರ ವಾದಿಸಿದ ವಕೀಲ ಜಾರ್ಜ್ ಜೋಸೆಫ್ ಅವರು, ಉದ್ಯಮಿ ವಿಜಯ ಮಲ್ಯ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಇನ್ನಿತರ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ, ಯುನೈಟೆಡ್ ಕಿಂಗ್‌ಡಮ್(ಯುಕೆ) ದೇಶಗಳಲ್ಲಿ ತಲೆ ಮರೆಸಿಕೊಂಡಿದ್ದಾರೆ. ಹೀಗಾಗಿ, ಇವರನ್ನು ಸಿಆರ್‌ಪಿಸಿ ಸೆಕ್ಷನ್ 100ರ ಅಡಿಯಲ್ಲಿ ಭಾರತಕ್ಕೆ ಕರೆದುಕೊಂಡು ಬರಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಿಜಯ ಮಲ್ಯ ಅವರು ಕಳೆದ ವರ್ಷ ಭಾರತವನ್ನು ಬಿಟ್ಟು ಹೊರ ನಡೆದಿದ್ದಾರೆ. ಹೈಕೋರ್ಟ್ ಆದೇಶದಂತೆ 2015ರ ಡಿಸೆಂಬರ್ 21ರಂದು ಅವರು ಭಾರತಕ್ಕೆ ಬರಬೇಕಾಗಿತ್ತು. ಆದರೆ, ಬರಲಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಪ್ರತಿವಾದಿ ಪರ ವಾದಿಸಿದ ವಕೀಲರು, ವಿಜಯ ಮಲ್ಯ ಭಾರತಕ್ಕೆ ಬರಬೇಕಾಗಿತ್ತು. ಆದರೆ, ಬಂದಿಲ್ಲ. ಅವರೂ ಈಗಾಗಲೇ ಭಾರತಕ್ಕೆ ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.





