ಸಚಿವ ಸುಪ್ರೀಯೋ ವಿರುದ್ಧ ಬಂಧನ ವಾರಂಟ್
ಕೋಲ್ಕತಾ,ಮಾ.10: ತನ್ನ ಚಾರಿತ್ರ ನಿಂದನೆ ಮಾಡಿದ್ದಾರೆಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಶಾಸಕಿಯೊಬ್ಬರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ವಿರುದ್ಧ ಸ್ಥಳೀಯ ನ್ಯಾಯಾಲಯವೊಂದು ಶುಕ್ರವಾರ ಜಾಮೀನು ಯೋಗ್ಯ ಬಂಧನ ವಾರಂಟ್ ಜಾರಿಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ, ಸುಪ್ರೀಯೋ ವಿರುದ್ಧ ನ್ಯಾಯಾಲಯ ಮೂರು ಬಾರಿ ಸಮನ್ಸ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ವಿವಿಧ ಕಾರಣಗಳನ್ನು ಮುಂದಿಟ್ಟು ಅವರು ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದಾರೆಂದು ಕೋಲ್ಕತಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಲ್ಕತಾ ಪೊಲೀಸರು ಬುಧವಾರ ಸಚಿವ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಲಿಪೋರ್ ನ್ಯಾಯಾಲಯವು ಸುಪ್ರಿಯೋ ವಿರುದ್ಧ ಇಂದು ಜಾಮೀನು ಯೋಗ್ಯ ಬಂಧನ ವಾರಂಟ್ ಜಾರಿಗೊಳಿಸಿದೆಯೆಂದು ಅವರು ಹೇಳಿದ್ದಾರೆ.
ಜನವರಿ 3ರಂದು ಟಿವಿ ಚಾನೆಲೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಬಾಬುಲ್ ಅವರು ತನ್ನ ಚಾರಿತ್ರವನ್ನು ಅಪಮಾನಿಸುವಂತಹ ಪದಗಳನ್ನು ಬಳಸಿದ್ದಾರೆಂದು, ಟಿಎಂಸಿ ಶಾಸಕಿ ಮೊಹುವಾ ಮೊಯಿತ್ರಾ ಅವರು ಜನವರಿ 4ರಂದು ಪೊಲೀಸರಿಗೆ ದೂರು ನೀಡಿದ್ದರು. ಟಿವಿ ಶೋನಲ್ಲಿ ಬಾಬುಲ್ ಅವರು, ಸ್ಥಳೀಯ ಪಾನೀಯ ‘ಮೊಹುವಾ’ದ ಜೊತೆ ತನ್ನ ಹೆಸರನ್ನು ಥಳಕು ಹಾಕಿ, ಗೇಲಿ ಮಾಡಿದ್ದರೆಂದು ಆಕೆ ದೂರಿನಲ್ಲಿ ಆಪಾದಿಸಿದ್ದರು.
ಬಾಬುಲ್ ಅವರು ಮಾಡಿದ್ದಾರೆನ್ನಲಾದ ವಿವಾದಿತ ಹೇಳಿಕೆಯ ವಿಡಿಯೋ ಚಿತ್ರಿಕೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯೆಯಾಗಿ ಸುಪ್ರೀಯೋ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲವೆಂದು ತಿಳಿದುಬಂದಿದೆ.





