ಧಾರ್ಮಿಕ ಅಸಹಿಷ್ಣುತೆ ಪ್ರಚೋದಿಸುವ 125 ಶಾಲೆಗಳಿಗೆ ಪ.ಬಂಗಾಳ ನೋಟಿಸ್
ಹೊಸದಿಲ್ಲಿ, ಮಾ.10: ವಿದ್ಯಾರ್ಥಿಗಳ ನಡುವೆ ಕೋಮುವಿಭಜನೆಯನ್ನು ಸೃಷ್ಟಿಸುತ್ತಿವೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವು ಸುಮಾರು 125 ಶಾಲೆಗಳಿಗೆ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ. ಈ ಶಾಲೆಗಳಲ್ಲಿ ಹೆಚ್ಚಿನವು ಅಗತ್ಯ ಪರವಾನಿಗೆಗಳನ್ನು ಹೊಂದಿಲ್ಲ ಹಾಗೂ ಸರ ಕಾರದಿಂದ ಅನುಮೋದನೆ ಪಡೆದುಕೊಂಡಿಲ್ಲವೆಂದು ರಾಜ್ಯದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಬುಧವಾರ ವಿಧಾನಸಭಾ ಕಲಾಪದ ವೇಳೆ ಮಾತನಾಡುತ್ತಿದ್ದ ಅವರು, ಈ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆದಿದ್ದು, ಶಾಲೆಗಳು ಧಾರ್ಮಿಕ ಕಟ್ಟಳೆಗಳನ್ನು ಬೋಧಿಸುತ್ತಿರುವುದು ಕಂಡುಬಂದಲ್ಲಿ ಅವು ಗಳನ್ನು ನಿಲ್ಲಿಸಲಾಗುವುದು ಎಂದು ಹೇಳಿದರು. ಬೋಧನೆಯ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ಯನ್ನು ಹರಡುವುದನ್ನು ತೃಣಮೂಲ ಕಾಂಗ್ರೆಸ್ ಸರಕಾರವು ಸಹಿಸದು ಎಂದವರು ಎಚ್ಚರಿಕೆ ನೀಡಿದರು.
ಪ.ಬಂಗಾಳದಲ್ಲಿ ಬಲಪಂಥೀಯ ಸಂಘಟನೆಗಳಿಗೆ ನಿಷ್ಠವಾಗಿರುವ 350 ಶಾಲೆಗಳಿದ್ದು ಅವು ಧಾರ್ಮಿಕ ಅಸಹಿಷ್ಣುತೆಗೆ ಕುಮ್ಮಕ್ಕು ನೀಡುತ್ತಿವೆಯೆಂದು ಪ್ರತಿಪಕ್ಷ ಸಿಪಿಎಂ ಆರೋಪಿಸಿದ ಆರೋಪಿಸಿರುವ ಹಿನ್ನೆಲೆಯಲ್ಲಿ ಚಟರ್ಜಿ ಅವರು ಸದನಕ್ಕೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು. ಈ ಶಾಲೆಗಳು ಹೆಚ್ಚಾಗಿ ಉತ್ತರ 24 ಪರಗಣ ಹಾಗೂ ಉತ್ತರಬಂಗಾಳ ಪ್ರದೇಶದಲ್ಲಿರುವುದಾಗಿ ಅವರು ತಿಳಿಸಿದರು.