ಚಲಾವಣೆಯಲ್ಲಿರುವ ನೋಟುಗಳ ವೌಲ್ಯದಲ್ಲಿ ಕುಸಿತ
ನೋಟು ನಿಷೇಧದ ಪರಿಣಾಮ
ಹೊಸದಿಲ್ಲಿ, ಮಾ.10: ನೋಟು ನಿಷೇಧದ ಬಳಿಕ ಚಲಾವಣೆಯಲ್ಲಿ ಇರುವ ಕರೆನ್ಸಿ ನೋಟುಗಳ ಒಟ್ಟು ವೌಲ್ಯ (ಇಂಟರ್‌ನ್ಯಾಷನಲ್ ನಾರ್ಮಲೈಸ್‌ಡ್ ರೇಶಿಯೊ) ಐಎನ್‌ಆರ್ 11.73 ಲಕ್ಷ ಕೋಟಿಗೆ ಕುಸಿದಿದೆ ಎಂದು ಸರಕಾರ ತಿಳಿಸಿದೆ. ಕಳೆದ ವರ್ಷದ ಮಾರ್ಚ್ 31ರ ಅವಧಿಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿ ನೋಟುಗಳ ವೌಲ್ಯ ಐಎನ್‌ಆರ್ 16.41 ಲಕ್ಷ ಕೋಟಿ ಆಗಿತ್ತು ಎಂದು ವಿತ್ತ ಸಚಿವಾಲಯದ ಸಹಾಯಕ ಸಚಿವ ಅರ್ಜುನ್‌ರಾಮ್ ಮೇಘ್‌ವಾಲ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಚಲಾವಣೆಯಲ್ಲಿದ್ದ ನಿರ್ದಿಷ್ಟ ಬ್ಯಾಂಕ್ ನೋಟುಗಳನ್ನು ನಿಷೇಧಗೊಳಿಸಿರುವುದು ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂದು ಸಚಿವರು ತಿಳಿಸಿದರು.
2014ರ ಮಾರ್ಚ್ 31ರಂದು ಐಎನ್‌ಆರ್ 12.82 ಲಕ್ಷ ಕೋಟಿ ವೌಲ್ಯದಷ್ಟು ನೋಟುಗಳು ಚಲಾವಣೆಯಲ್ಲಿದ್ದವು. 2015ರ ಮಾರ್ಚ್ ಅಂತ್ಯದ ವೇಳೆ ಇದರ ಮೊತ್ತ ಐಎನ್‌ಆರ್ 14.28 ಲಕ್ಷ ಕೋಟಿಗೆ ಹೆಚ್ಚಿತು. 2016ರ ಮಾರ್ಚ್ 31ಕ್ಕೆ ಈ ಮೊತ್ತ 16.41 ಲಕ್ಷ ಕೋಟಿ ತಲುಪಿತು. 2017ರ ಫೆಬ್ರವರಿ ಅಂತ್ಯದ ವೇಳೆಗೆ 1.9 ಬಿಲಿಯನ್ ಐಎನ್‌ಆರ್ 5 ರೂ. ನಾಣ್ಯ ಮತ್ತು 1.03 ಬಿಲಿಯನ್ ಐಎನ್‌ಆರ್ 10 ರೂ. ನಾಣ್ಯ ಚಲಾವಣೆಯಲ್ಲಿವೆ. ಜೊತೆಗೆ 2.6 ಬಿಲಿಯನ್ ಐಎನ್‌ಆರ್ 10 ರೂ. ನೋಟು ಮತ್ತು 3.6 ಬಿಲಿಯನ್ ಐಎನ್‌ಆರ್ 20 ರೂ. ನೋಟು ಚಲಾವಣೆಯಲ್ಲಿವೆ. ಹೊಸ ಐಎನ್‌ಆರ್ 500 ಮತ್ತು 100 ರೂ. ಮುಖಬೆಲೆಯ ನೋಟುಗಳ ಮುದ್ರಣ ವೆಚ್ಚದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಈ ವೆಚ್ಚ ಪ್ರತ್ಯಕ್ಷ ಮತ್ತು ಪರೋಕ್ಷ ಸಾಮಗ್ರಿ ವೆಚ್ಚ ಹಾಗೂ ದುಡಿಮೆ ವೆಚ್ಚವನ್ನು ಹೊಂದಿಕೊಂಡು ಪ್ರತೀ ವರ್ಷ ಬದಲಾಗುತ್ತದೆ ಎಂದರು. ಯಂತ್ರದ ವಿನ್ಯಾಸ, ಯಂತ್ರದ ಅವಧಿ, ಕೆಲಸಗಾರರ ಕೌಶಲ್ಯ ಇತ್ಯಾದಿಗಳನ್ನು ಇದು ಅವಲಂಬಿಸಿದೆ. ಪ್ರತೀ ಐಎನ್‌ಆರ್ 500 ರೂ. ನೋಟುಗಳ ಮುದ್ರಣ ವೆಚ್ಚ 2.87 ರೂ.ನಿಂದ 3.09 ರೂ.ವರೆಗೆ ಇರುತ್ತದೆ. ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ವೆಚ್ಚ 3.54 ರೂ.ನಿಂದ 3.77 ರೂ, 2000 ರೂ. ಮುಖಬೆಲೆಯ ನೋಟುಗಳ ಮುದ್ರಣ ವೆಚ್ಚ ಹಳೆಯ ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ವೆಚ್ಚಕ್ಕೆ ಸಮವಾಗಿದೆ ಎಂದ ಸಚಿವರು, ಒಟ್ಟು ನಾಲ್ಕು ಪ್ರೆಸ್‌ಗಳಲ್ಲಿ ನೋಟು ಮುದ್ರಿಸಲಾಗುತ್ತಿದೆ. ಇದರಲ್ಲಿ ಎರಡು ಪ್ರೆಸ್‌ಗಳು ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ ಅಡಿಯಲ್ಲಿ, ಇನ್ನೆರಡು ಪ್ರೆಸ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವರು ವಿವರಿಸಿದ್ದಾರೆ.