ಮುಲ್ಕಿ: ಬಪ್ಪನಾಡು ದೇವಳ ಸಿಬ್ಬಂದಿಗೆ ವೇತನ ತಾರತಮ್ಯ ಆರೋಪ
.jpg)
ಮುಲ್ಕಿ, ಮಾ.10: ಇಲ್ಲಿನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಸಿಬ್ಬಂದಿಗೆ ಸರಕಾರಿ ಸವಲತ್ತುಗಳು ದೊರೆಯಬೇಕು ಮತ್ತು ವೇತನ ತಾರತಮ್ಯ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಸಿಬ್ಬಂದಿ ಶುಕ್ರವಾರ ದೇವಸ್ಥಾನದ ಎದುರು ಧರಣಿ ನಡೆಸಿದರು.
ಧರಣಿನಿರತರ ಪರವಾಗಿ ಮಾತನಾಡಿದ ಶ್ರೀನಾಥ್ ಭಟ್, ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನದಲ್ಲಿ ದುಡಿಯುತ್ತಿದ್ದರೂ ಸರಕಾರಿ ಸವಲತ್ತುಗಳು ದೊರೆಯುತ್ತಿಲ್ಲ. ಹೆಸರಿಗೆ ಮಾತ್ರ ಸರಕಾರಿ ಕೆಲಸ. ಆದರೆ, ಯಾವುದೇ ಸರಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಸಮಾಜ ಸೇವಕ ಸಾಧು ಅಂಚನ್, ದೇವಳಕ್ಕೆ ಕೋಟ್ಯಂತರ ರೂಪಾಯಿ ಆದಾಯವಿದ್ದರೂ ಸಕಾರದ ನೌಕರರಿಗೆ ಸೌಲಭ್ಯಗಳನ್ನು ಒದಗಿಸಲು ಮೀನ ಮೇಷ ಎಣಿಸುತ್ತಿದೆ. ದೇವಳವನ್ನು ಅಭ್ವಿದ್ಧಿ ಪಡಿಸಲು ದೇವಳದ ನೌಕರರ ಪಾತ್ರ ಮಹತ್ವದ್ದು. ಅವರನ್ನು ನಿರ್ಲಕ್ಷ್ಯಸುತ್ತಿರುವುದು ಖಂಡನೀಯ ಎಂದರು.
ಕೂಡಲೇ ಮುಜರಾಯಿ ಇಲಾಖೆ ದೇವಳದ ಸಿಬ್ಬಂದಿಯ ವೇತನ ಪರಿಷ್ಕರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ ಅವರು, ಇದು ಸಾಂಕೇತಿಕ ಧರಣಿಯಷ್ಟೇ. ವೇತನ ಪರಿಷ್ಕರಣೆಯಾಗದಿದ್ದರೆ ಮುಂದಿನ ದಿನಗಳಲ್ಲಿ ದೇವಳದ ಸಿಬ್ಬಂದಿಯ ಪರ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ದೇವಳದ ಸಿಬ್ಬಂದಿಯ ವೇತನ ತಾರತಮ್ಯ ನೀತಿಯ ಬಗ್ಗೆ ಮತ್ತು ಸೌಲಭ್ಯಗಳ ಕಲ್ಪಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರಕಾರದಿಂದ ಪರಿಶೀಲನೆ ನಡೆಸುವ ಭರವಸೆ ಸಿಕ್ಕಿದೆ.
ಮನೋಹರ ಶೆಟ್ಟಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ







