ನೀಟ್ ಪರೀಕ್ಷೆಗೆ ಉರ್ದು ಸೇರ್ಪಡೆ : ಮುಂದಿನ ವರ್ಷ ಜಾರಿಗೆ ಕೇಂದ್ರ ಪರಿಶೀಲನೆ

ಹೊಸದಿಲ್ಲಿ,ಮಾ.10: ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್‌ಗಳ ಪ್ರವೇಶಾತಿಗಾಗಿನ ‘ನೀಟ್’ ಪರೀಕ್ಷೆಗೆ ಉರ್ದುವನ್ನು ಸೇರ್ಪಡೆಗೊಳಿಸುವ ಬಗ್ಗೆ ತಾನು ಪರಿಶೀಲಿಸುತ್ತಿರುವುದಾಗಿ ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ನೀಟ್ ಪರೀಕ್ಷೆ ಬರೆಯಬಹುದಾದ ಭಾಷೆಗಳ ಸಾಲಿಗೆ ಉರ್ದುವನ್ನು ಈ ವರ್ಷ ಸೇರ್ಪಡೆಗೊಳಿಸಲು ಸರಕಾರಕ್ಕೆ ಸಾಧ್ಯವಾಗಲಾರದು. ಆದರೆ 2017-18ರ ಶೈಕ್ಷಣಿಕ ವರ್ಷದಲ್ಲಿ ಅದನ್ನು ಸೇರ್ಪಡೆಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಸರಕಾರದ ವಕೀಲರು ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ಆರ್. ಭಾನುಮತಿ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
ನೀಟ್ ಪರೀಕ್ಷೆ ಬರೆಯಬಹುದಾದ ಭಾಷೆಗಳ ಪಟ್ಟಿಯಿಂದ ಉರ್ದುವನ್ನು ಹೊರತುಪಡಿಸಿರುವುದನ್ನು ಪ್ರಶ್ನಿಸಿ ಜಮಾಅತೆ ಇಸ್ಲಾಮಿ ಹಿಂದ್‌ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಸುಪ್ರೀಂಕೋರ್ಟ್‌ನ ಮೆಟ್ಟಲೇರಿತ್ತು. ಕೇಂದ್ರದ ಈ ಧೋರಣೆ ತಾರತಮ್ಯದಿಂದ ಕೂಡಿದೆ ಮತ್ತು ಏಕಪಕ್ಷೀಯವಾಗಿದೆ ಮತ್ತು ಸಂವಿಧಾನದ 14 ಹಾಗೂ 21ನೆ ನಿಯಮಗಳ ಉಲ್ಲಂಘನೆಯಾಗಿದೆಯೆಂದು ಅದು ಆಪಾದಿಸಿತ್ತು.
ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳು ಉರ್ದುವನ್ನು ನೀಟ್ ಪರೀಕ್ಷೆಯ ಭಾಷೆಗಳಲ್ಲೊಂದಾಗಿ ಸೇರ್ಪಡೆಗೊಳಿಸುವಂತೆ ಮನವಿ ಸಲ್ಲಿಸಿರುವುದಾಗಿ ಕೇಂದ್ರ ಸರಕಾರದ ವಕೀಲರು ತಿಳಿಸಿದರು. ಮೇ 7ರಂದು ನಡೆಯಲಿರುವ 2017ನೇ ಸಾಲಿನ ನೀಟ್ ಪರೀಕ್ಷೆಯ ಅರ್ಜಿ ನಮೂನೆ ಈಗಾಗಲೇ ಹೊರಬಿದ್ದಿದ್ದು, ಅರ್ಜಿ ಸಲ್ಲಿಕೆಗೆ ಮಾರ್ಚ್ 1 ಕೊನೆ ದಿನಾಂಕವಾಗಿದೆೆ. ಈ ಪರೀಕ್ಷೆಯು ಇಂಗ್ಲಿಷ್ ಅಲ್ಲದೆ ಇತರ ಎಂಟು ಭಾರತೀಯ ಭಾಷೆಗಳಲ್ಲಿ ನಡೆಯಲಿದೆ.
ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯ ಅಧಿಸೂಚನೆಯ ಪ್ರಕಾರ ನೀಟ್ ಪರೀಕ್ಷೆಯನ್ನು ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ತಮಿಳು, ಗುಜರಾತಿ, ಮರಾಠಿ, ಅಸ್ಸಾಮಿ ಹಾಗೂ ಬಂಗಾಳಿ ಭಾಷೆಗಳಲ್ಲಿ ನಡೆಸಲಾಗುತ್ತದೆ.







